ಗದಗ: ನಗರದ ಕಿಲ್ಲಾ ಓಣಿಯಲ್ಲಿ ವಿಶೇಷ ಹಾಗೂ ವಿಭಿನ್ನವಾದ ರತಿ-ಕಾಮರಿದ್ದಾರೆ. ಅವರು ಮದುವೆ ಆಗದವರಿಗೆ ಕಂಕಣ ಭಾಗ್ಯ. ಮಕ್ಕಳು ಆಗದವರಿಗೆ ಸಂತಾನ ಭಾಗ್ಯ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ. ಬಡವರಿಗೆ ಸಿರಿತನ ಭಾಗ್ಯ ಕರುಣಿಸುತ್ತಾರೆ. ಏನಿದು ಚುನಾವಣೆಗಳ ಭರವಸೆ ಅಂತಾ ಅಂದುಕೊಳ್ಳಬೇಡಿ. ಇದು ಬೇಡಿ ಬಂದವರಿಗೆ ಬಯಸಿದ್ದನ್ನು ನೀಡುವ ಗದಗದ ಇಷ್ಟಾರ್ಥ ರತಿ-ಕಾಮರ ಜಾತ್ರೆಯ ವಿಶೇಷವಾಗಿದೆ.
ನಗರದಲ್ಲಿ 155 ವರ್ಷಗಳಿಂದ ಈ ಕಾಮ-ರತಿಯರನ್ನು ಪ್ರತಿಷ್ಠಾಪಿಸುತ್ತಾ ಬಂದಿದ್ದಾರೆ. ಇದಕ್ಕೆ ಸರ್ಕಾರಿ ರತಿ-ಕಾಮರು ಎಂತೆಲ್ಲಾ ಕರೆಯುತ್ತಾರೆ. ಇಲ್ಲಿಯ ರತಿಗೆ ಪ್ರತಿವರ್ಷ ಸುಮಾರು 25 ರಿಂದ 30 ಕೆಜಿ ವರೆಗೆ ಬಂಗಾರದ ವಿವಿಧ ಲೇಪನಗಳನ್ನ ಹಾಕಲಾಗುತ್ತದೆ. ಮನ್ಮಥ ಅಪ್ಪಟ ಚಿನ್ನದ ಕಂಠಿಹಾರ, ರತಿಗೆ ಕಿಲೋ ಗಟ್ಟಲೆ ಚಿನ್ನದ ಸರಗಳಿಂದ ಅಲಂಕರಿಸಿ ರತಿ-ಮನ್ಮಥರನ್ನು ಅದ್ದೂರಿಯಾಗಿ ಸಿದ್ಧಮಾಡುತ್ತಾರೆ.
ತಮ್ಮ ಮನೆಯಲ್ಲಿರುವ ಬಂಗಾರದ ವವಸ್ತುಗಳನ್ನು ಈ ರತಿಗೆ ನೀಡಿದರೆ ಬರುವ ವರ್ಷದಲ್ಲಿ ಮತ್ತಷ್ಟು ಬಂಗಾರ ಹೆಚ್ಚಾಗುತ್ತೆ ಎಂಬ ನಂಬಿಕೆ. ರಾಶಿಗಟ್ಟಲೆ ಬಂಗಾರದ ಆಭರಣಗಳು ಇಲ್ಲಿ ಜಮಾವಣೆಯಾಗಿರುತ್ತವೆ. ಭಕ್ತರು ಕೊಡುವ ಆಭರಣಗಳನ್ನು ಈ ರತಿ-ಕಾಮರ ಕಮೀಟಿಯವರು ಅವುಗಳಿಗೆ ಅವರ ಹೆಸರು ಬರೆದು ನೊಂದಾಯಿಸಿಕೊಂಡು ಒಂದು ಚೀಟಿ ಕೊಡುತ್ತಾರೆ. ಆ ಬಂಗಾರಕ್ಕೆ ಭಕ್ತರ ಹೆಸರಿನ ಒಂದು ಸಣ್ಣ ಚೀಟಿ ಸಹ ಬರೆದು ಹಾಕಲಾಗುತ್ತದೆ. ಜೊತೆಗೆ ಭದ್ರತೆ ಕೂಡಾ ಇರುವುದರಿಂದ ಒಂದು ತುಂಡು ಬಂಗಾರ ಸಹ ಕದಲುವುದಿಲ್ಲ. ಭಕ್ತರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಇದು ಹಿಂದಿನಿಂದ ನಡೆದು ಬಂದ ಸಂಪ್ರದಾಯ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊರೊನಾ 2ನೇ ಅಲೆಯ ಮಧ್ಯೆಯೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. 155 ವರ್ಷಗಳ ಇತಿಹಾಸವಿರುವ ನಗರದ ರತಿ-ಕಾಮರ ಹೋಳಿ ಆಚರಣೆಗೆ ತನ್ನದೆ ಆದ ವೈಶಿಷ್ಟ್ಯವಿದೆ. 5 ದಿನಗಳ ವರೆಗೆ ರತಿ ಮನ್ಮಥರನ್ನು ಪ್ರತಿಷ್ಠಾಪಿಸುತ್ತಾರೆ. ಪ್ರತಿ ನಿತ್ಯ ಎರಡು ಭಾರಿ ಸಿಹಿ ಅಡುಗೆ ಎಡೆಮಾಡುವ ಮೂಲಕ ಪೂಜೆ ಮಾಡುತ್ತಾರೆ. ಈ ರತಿ ಕಾಮರಿಗೆ ಪೂಜೆ ಸಲ್ಲಿಸಿದರೆ ಮದುವೆಯಾಗದವರಿಗೆ ಕಂಕಣ ಭಾಗ್ಯ, ಮಕ್ಕಳಾಗದವರಿಗೆ ಸಂತಾನ ಭಾಗ್ಯ, ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ, ಸೊಂಬೆರಿಗಳಿಗೆ ಸಿರಿತನ ಹೀಗೆ ಬೇಡಿಬಂದ ಭಕ್ತರಿಗೆ ಬಯಸಿದ್ದನ್ನೆಲ್ಲವನ್ನು ನೀಡುವ ಸರಸ ಭಂಗಿಯ ಕಲ್ಪ ವೃಕ್ಷವಿದ್ದಂತೆ ಎಂಬ ನಂಬಿಕೆ ಇದೆ.
ಜಾತ್ರೆಯಲ್ಲಿ ಅನೇಕ ಯುವತಿಯರು ಕಂಕಣ ಕಟ್ಟಿದರು, ಮಕ್ಕಳಾಗದ ಮಹಿಳೆಯರು ತೊಟ್ಟಿಲು, ಅರಿಶಿನ ಕುಂಕುಮ, ಕಣವಿಟ್ಟರು. ನಿರುದ್ಯೋಗಿಗಳು ಭಕ್ತಿಯಿಂದ ಬೇಡಿಕೊಂಡರು. ಈ ಬಂಗಾರದ ರತಿ-ಕಾಮರ ದರ್ಶನಕ್ಕೆ ವಿವಿಧ ಜಿಲ್ಲೆಯಿಂದಲೂ ಭಕ್ತರು ಬರುತ್ತಾರೆ. ಸುಮಾರು 30 ಕೆಜಿ ವರೆಗೆ ಬೆಳ್ಳಿ-ಬಂಗಾರ ವಸ್ತುಗಳನ್ನ ಮೂರ್ತಿಗೆ ಹಾಕುತ್ತಾರೆ. ಈ ಬಂಗಾರದ ರತಿ-ಕಾಮರನ್ನು ನೋಡಲು ಅನೇಕ ಭಕ್ತ ಸಮೂಹವೇ ಇಲ್ಲಿಗೆ ಹರಿದು ಬಂದು ಭಕ್ತಿಯಿಂದ ಬೇಡಿಕೊಂಡಿದ್ದಾರೆ. ಜನರು ತಮ್ಮ ಬೇಡಿಕೆಗಳಿಗೆ ಸರ್ಕಾರಕ್ಕೆ ಮೊರೆ ಇಟ್ಟರೆ ಅದು ಈಡೇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಕೊರಳಲ್ಲಿ ಕೆಜಿಗಟ್ಟಲೆ ಚಿನ್ನದ ಸರ ಹಾಕಿಕೊಂಡು ಮೆರೆಯುವ ಗದುಗಿನ ಸರ್ಕಾರಿ ರತಿಕಾಮರನ್ನು ಬೇಡಿಕೊಂಡರೆ ಈಡೇರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.