ಬೆಂಗಳೂರು: ಪಂಚಮಸಾಲಿಗಳ ಧರಣಿ ಅಂತ್ಯ ಕಂಡ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಮತ್ತೊಂದು ಪ್ರತಿಭಟನೆ ಎದುರಾಗೋ ಎಲ್ಲಾ ಲಕ್ಷಣಗಳು ಕಾಣ್ತಿವೆ. ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೊಂದು ಹೋರಾಟಕ್ಕೆ ಸಿದ್ಧರಾಗಿದ್ದಾರೆ.
ಯಡಿಯೂರಪ್ಪ ಸರ್ಕಾರಕ್ಕೆ ಸಾರಿಗೆ ನೌಕರರು ಕೊಟ್ಟ ಗಡುವು ನಿನ್ನೆಗೆ ಮುಗಿದಿದ್ದು, ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆ ಮತ್ತೊಮ್ಮೆ ಬಸ್ ಸಂಚಾರ ಬಂದ್ ಮಾಡಿ ಸರ್ಕಾರವನ್ನ ಎಚ್ಚರಿಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಈ ಸಂಬಂಧ ಇಂದು ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಚರ್ಚಿಸಿದ ಬಳಿಕವಷ್ಟೆ ಮುಂದಿನ ನಿರ್ಧಾರದ ಬಗ್ಗೆ ಸ್ಪಷ್ಟನೆ ಸಿಗಲಿದೆ. ಈಗಾಗಲೇ ಟ್ರೇಡ್ ಯೂನಿಯನ್ ಆಕ್ಟ್ ಅಡಿಯಲ್ಲಿ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗೆ ತಿಳುವಳಿಕೆ ಪತ್ರ ನೀಡಲು ಸಾರಿಗೆ ನೌಕರರ ಸಂಘಟನೆ ಸಜ್ಜಾಗಿದೆ. ಈ ಪ್ರಕಾರ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಗೆ ತಿಳುವಳಿಕೆ ಪತ್ರ ನೀಡಿದ ಬಳಿಕ 22 ದಿನಗಳಲ್ಲಿ ಉತ್ತರವನ್ನ ನೀಡಲೇಬೇಕಿದೆ. ಈ ಅವಧಿಯಲ್ಲಿ ಸ್ಪಂದಿಸದಿದ್ರೆ ಮತ್ತೊಂದು ಆಯಾಮದ ಹೋರಾಟಕ್ಕೂ ಸಿದ್ಧತೆ ನಡೆಸಲು ಸಾರಿಗೆ ನೌಕರರು ತೀರ್ಮಾನಿಸಿದ್ದಾರೆ.