ಬೇಡಿಕೆಗೆ ಒಪ್ಪಿರುವ ಬಗ್ಗೆ ನಡವಳಿಕೆ ಪತ್ರ ಕಳುಹಿಸಿದ ಸಚಿವ ಸವದಿ- ಕೆಲವೇ ಗಂಟೆಗಳಲ್ಲಿ ಬಸ್ ಸಂಚಾರ ಆರಂಭ?

Public TV
2 Min Read
ksrtc stike letter

– ಮುಷ್ಕರ ಕೈ ಬಿಡುವಂತೆ ಸಾರಿಗೆ ನೌಕರರಿಗೆ ಮನವಿ

ಬೆಂಗಳೂರು: ಸರ್ಕಾರ ಹಾಗೂ ಸಾರಿಗೆ ನೌಕರರ ಹಗ್ಗ ಜಗ್ಗಾಟ ತಾರಕಕ್ಕೇರಿದ್ದು, ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ ಮುಷ್ಕರ ವಾಪಸ್ ಪಡೆಯುವುದಾಗಿ ಹೇಳಿ ನೌಕರರು ಯು ಟರ್ನ್ ಹೊಡೆದಿದ್ದರು. ಇಂದು ಸಹ ಸಂಧಾನ ಪ್ರಹಸನ ನಡೆಯುತ್ತಿದ್ದು, ನೌಕರರ ಬೇಡಿಕೆಗೆ ಒಪ್ಪಿರುವ ಕುರಿತು ನಡವಳಿಕೆ ಪತ್ರವನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಭಟನಾಕಾರರಿಗೆ ಕಳುಹಿಸಿದ್ದಾರೆ.

bmtc letter 2

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೇಡಿಕೆ ಈಡೇರಿಕೆ ಕುರಿತು ಭಾನುವಾರವೇ ಒಪ್ಪಿದೆ. ಅದರಂತೆ ಭಾನುವಾರವೇ ಪತ್ರವನ್ನು ಸಹ ಸಿದ್ದ ಪಡಿಸಲಾಗಿದೆ. ಆದರೆ ನೌಕರರು ನಿನ್ನೆ ರಾತ್ರಿ ಯಾಕೆ ತಮ್ಮ ನಿರ್ಧಾರ ಬದಲಿಸಿದರೋ ಗೊತ್ತಿಲ್ಲ. ಇದೀಗ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿರುವ ಬಗ್ಗೆ ನೌಕರರು ಪತ್ರವನ್ನು ಕೇಳುತ್ತಿದ್ದಾರೆ. ಅದರಂತೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರ ಜೊತೆ ನಡವಳಿಕೆ ಪತ್ರವನ್ನು ಕಳುಹಿಸಿಕೊಡಲಾಗಿದೆ. ನೌಕರರು ಮುಷ್ಕರವನ್ನು ಹಿಂಪಡೆಯುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.

BUS 5

ಕೋಡಿಹಳ್ಳಿ ಚಂದ್ರಶೇಖರ್ ಪದೇ ಪದೇ ಮಾತು ಬದಲಾವಣೆ ಮಾಡುತ್ತಿದ್ದಾರೆ. ಅವರಲ್ಲಿ ಗೊಂದಲ ಇದ್ದಂತೆ ಕಾಣುತ್ತಿದೆ. ಈಗ ಪತ್ರ ಕಳಿಸಿದ್ದೇವೆ ನೋಡೋಣ. ವಾಪಸ್ ಪಡಿತಾರೆ ಅನ್ನೋ ವಿಶ್ವಾಸ ಇದೆ ಎಂದರು.

ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ 10 ಬೇಡಿಕೆಗಳ ಪೈಕಿ 9 ಬೇಡಿಕೆ ಈಡೇರಿಕೆ ಮಾಡಲಾಗಿದೆ. ನಿನ್ನೆ ಸಂಧಾನಕ್ಕೆ ಒಪ್ಪಿ, ಬಳಿಕ ಯಾಕೆ ಯೂಟರ್ನ್ ಆದರೋ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ್ ವಾಪಸ್ ಪಡೆಯುತ್ತೇವೆ ಅಂತ ಹೇಳಿದ್ದಾರೆ. ಅವರು ಬೆಂಬಲ ವಾಪಸ್ ಪಡೆಯಲಿ ನಂತರ ಮಾತನಾಡುತ್ತೇನೆ. ಕೋಡಿಹಳ್ಳಿ ಪ್ರತಿಭಟನೆ ಹಿಂದೆ ರಾಜಕೀಯ ಇರುವುದರಲ್ಲಿ ಎರಡು ಮಾತಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಜೊತೆ ನಾವ್ಯಾಕೆ ಮಾತಾಡೋಣ. ನಮ್ಮ ನೌಕರರ ಜೊತೆ ನಾವು ಮಾತನಾಡುತ್ತೇವೆ. ಕೋಡಿಹಳ್ಳಿ ಚಂದ್ರಶೇಖರ್ ಯಾರು ಎಂದು ಸವದಿ ಪ್ರಶ್ನಿಸಿದರು.

KODIHALLI

ಈಗಾಗಲೇ ಬಸ್ ಸಂಚಾರ ಪ್ರಾರಂಭ ಆಗಿದೆ. ನೌಕರರಿಗೆ ತೊಂದರೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ. ನೌಕರರು ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಎಂದು ನೌಕರರಿಗೆ ಸವದಿ ಮತ್ತೆ ಮನವಿ ಮಾಡಿದರು. ಎಸ್ಮಾ ಜಾರಿ ಈಗ ಅವಶ್ಯಕತೆ ಇಲ್ಲ. ಈಗಾಗಲೇ ಬಸ್ ಗಳು ಓಡಾಟ ಪ್ರಾರಂಭ ಮಾಡಿವೆ. ಅವರು ನಮ್ಮ ನೌಕರರೇ, ಉಳಿದ ಎಲ್ಲ ನೌಕರರು ಕೆಲಸಕ್ಕೆ ಹಾಜರಾಗಲು ಮನವಿ ಮಾಡುತ್ತೇನೆ. ಎಸ್ಮಾ ಅನ್ನೋದು ಬ್ರಹ್ಮಾಸ್ತ್ರ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *