– ತಗ್ಗು ಪ್ರದೇಶದಲ್ಲಿರೋ ಮನೆಗಳಿಗೆ ನುಗ್ಗಿದ ನೀರು
ಬೀದರ್: ಕಲಬುರಗಿ, ದಕ್ಷಿಣ ಕನ್ನಡ ಮತ್ತು ಗಡಿ ಜಿಲ್ಲೆ ಬೀದರ್ ಸೇರಿದಂತೆ ಅನೇಕ ಕಡೆ ಬೆಳಗ್ಗೆಯಿಂದ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಶನಿವಾರ ತಡರಾತ್ರಿ ಕೂಡ ಜಿಲ್ಲೆಯ ಹಲವು ಕಡೆ ಮಳೆಯಾಗಿದ್ದು, ಇಂದು ಜಿಲ್ಲೆಯಲ್ಲಿ ವರುಣದೇವ ಅಬ್ಬರಿಸುವ ಸಾಧ್ಯತೆ ಇದೆ. ರೈತರು ಬಿತ್ತನೆಗಾಗಿ ಬೀಜಗಳನ್ನು ಸಿದ್ಧ ಮಾಡಿಕೊಂಡು ಮಳೆಯಾಗಿ ಕಾದುಕುಳಿತ್ತಿದ್ದರು. ಹೀಗಾಗಿ ಇಂದು ವರುಣ ದೇವ ಕೃಪೆ ತೋರಿದ್ದಾನೆ.
Advertisement
Advertisement
ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಮಳೆ ಸುರಿಯುತ್ತಿರುವ ಕಾರಣ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಪ್ರಾರಂಭವಾದರು ಮಳೆಯಾಗದ ಕಾರಣ ರೈತರು ಆತಂಕಗೊಂಡಿದ್ದರು. ಆದರೆ ಬೆಳಗ್ಗೆಯಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ನೋಡಿ ಕೃಷಿ ಚಟುವಟಿಕೆ ಪ್ರಾರಂಭಿಸುವ ಮೂಲಕ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಾರೆ.
Advertisement
ರಾಜ್ಯದ ಕರಾವಳಿಯ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ಮುಂಜಾನೆಯಿಂದ ಮಳೆ ಆರಂಭಗೊಂಡಿದೆ. ಕರಾವಳಿಗೆ ಮುಂಗಾರು ಮಳೆ ಪ್ರವೇಶವಾಗಿ ಇಪ್ಪತ್ತು ದಿನ ಕಳೆದಿದ್ದರೂ ಸರಿಯಾಗಿ ಮಳೆಯಾಗಿಲ್ಲ. ಕಳೆದ ಕೆಲದಿನಗಳಿಂದ ವಿಶ್ರಾಂತಿಯಲ್ಲಿದ್ದ ಮಳೆ ಇಂದು ಮುಂಜಾನೆಯಿಂದ ಸುರಿಯಲಾರಂಭಿಸಿದೆ. ಇಂದು ದಿನಪೂರ್ತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಜಿಲ್ಲೆಯ ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಇನ್ನುಳಿದಂತೆ ಜಿಲ್ಲಾದ್ಯಂತ ತುಂತುರು ಮಳೆಯಾಗುತ್ತಿದೆ.
Advertisement
ಕಲಬುರಗಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಹಲವೆಡೆ ಉತ್ತಮ ಮಳೆಯಾಗಿದೆ. ನಗರದ ಹಲವೆಡೆ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿನ ದಿನಸಿ ವಸ್ತುಗಳು ಹಾಗೂ ಎಲೆಕ್ಟ್ರಿಕಲ್ ವಸ್ತುಗಳು ನಾಶವಾಗಿವೆ. ಮಳೆಗಾಲ ಆರಂಭದಲ್ಲೇ ಸಮಸ್ಯೆಗಳು ಶುರುವಾಗಿವೆ. ಈಗಲಾದರೂ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಚರಂಡಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.