ಗದಗ: ಅತಿವೃಷ್ಟಿ, ಅನಾವೃಷ್ಟಿ, ರೋಗಬಾದೆ, ಬೆಳೆಗೆ ಸೂಕ್ತ ಬೆಲೆ ಸಿಗದೇ ಇರುವುದು. ಹೀಗೆ ನಾನಾ ಕಾರಣಗಳಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ಮಧ್ಯೆ ಮಹಾಮಾರಿ ಕೊರೊನಾ ಕಾಟ ಬೇರೆ. ಕಷ್ಟ ಕಾಲಕ್ಕೆ ಆಗುತ್ತೆ ಎಂದು ಬೆಳೆ ವಿಮೆ ಮಾಡಿಸಿದರೆ ಅದೂ ಸಹ ಕೈ ಸೇರುತ್ತಿಲ್ಲ. ಅತ್ತ ಬೆಳೆಯೂ ಇಲ್ಲ, ಇತ್ತ ಬೆಳೆ ವಿಮೆಯೂ ಇಲ್ಲದೇ ಅನ್ನದಾತರ ಬದುಕು ಅಯೋಮಯ ಆಗುತ್ತಿದೆ. ಹೀಗಾಗಿ ಕೂಡಲೇ ಬೆಳೆ ವಿಮೆ ಹಣವನ್ನು ಹಾಕುವಂತೆ ರೈತರು ಆಗ್ರಹಿಸಿದ್ದಾರೆ.
ಈ ಕುರಿತು ರೈತರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ರೈತರಿಗೆ ಬರಬೇಕಾಗಿರುವ ಸುಮಾರು 80 ಕೋಟಿ ರೂ. ಬೆಳೆ ವಿಮೆ ಪರಿಹಾರ ಇನ್ನೂ ಕೈ ಸೇರಿಲ್ಲ. ಬೆಳೆ ವಿಮೆಗಾಗಿ ಚಾತಕ ಪಕ್ಷಿಗಳಂತೆ ರೈತರು ಕಾಯುತ್ತಿದ್ದಾರೆ. 2019-20ನೇ ಸಾಲಿನಲ್ಲಿ ಮುಂಗಾರು ಸಂದರ್ಭದಲ್ಲಿ ಸುಮಾರು 1 ಲಕ್ಷ ರೈತರು ಬೆಳೆ ವಿಮೆ ತುಂಬಿದ್ದಾರೆ. ಆದರೆ ಈ ವರೆಗೆ ಕೇವಲ 20,638 ರೈತರಿಗೆ 15.72 ಕೋಟಿ ರೂ.ಗಳು ಮಾತ್ರ ರೈತರ ಖಾತೆಗೆ ಜಮಾ ಆಗಿದೆ. ಇನ್ನುಳಿದ ರೈತರಿಗೆ ಬಜಾಜ್ ಕಂಪನಿ ಬೆಳೆ ವಿಮೆ ನೀಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
Advertisement
Advertisement
ಸಾಲ ಮಾಡಿ, ಹೆಂಡತಿ, ಮಕ್ಕಳ ಒಡವೆಗಳನ್ನು ಅಡ ಇಟ್ಟು, ಹಣ ತಂದು ವಿಮೆ ತುಂಬಿದ್ದೇವೆ. ಹಣ ತುಂಬುವಾಗಲೂ ಉಪವಾಸ ಬಿದ್ದು, ಪೊಲೀಸರ ಲಾಠಿಯ ರುಚಿ ಉಂಡಿದ್ದೇವೆ. ಈಗ ಪರಿಹಾರ ಇಲ್ಲವಾದರೆ ನೋವಾಗುತ್ತದೆ. ಎಸಿ ರೂಮ್‍ನಲ್ಲಿ ಕೂತು ಸಮೀಕ್ಷೆ ಹೆಸರಲ್ಲಿ ರೈತರಿಗೆ ವಂಚನೆ ಮಾಡಬೇಡಿ. ಶೀಘ್ರದಲ್ಲೇ ವಿಮೆ ಹಣ ನೀಡಿ, ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ. ಜಿಲ್ಲಾಡಳಿತ ಹಾಗೂ ವಿಮೆ ಕಂಪನಿಗೆ ಮುತ್ತಿಗೆ ಹಾಕುತ್ತೇವೆ ಎಂದು ರೈತರು ಎಚ್ಚರಿಸಿದ್ದಾರೆ.
Advertisement
Advertisement
2019-20 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರು, ಮೆಕ್ಕೆಜೋಳ, ಶೇಂಗಾ, ಈರುಳ್ಳಿ, ಸೂರ್ಯಕಾಂತಿ, ಹತ್ತಿ ಬೆಳೆಗಳ ವಿಮೆ ಹಣ ಬರಬೇಕಿದೆ. ಈ ವರ್ಷ ಬೆಳೆ ವಿಮೆಯಡಿ ಹೆಸರನ್ನು ನೋಂದಾಯಿಸಲು ಹೆಸರು ಬೆಳೆಗೆ ಜುಲೈ 15, ಇನ್ನುಳಿದ ಎಲ್ಲಾ ಬೆಳೆಗಳಿಗೆ ಜುಲೈ 31 ಹಾಗೂ ನೀರಾವರಿ ಬೆಳೆಗಳಿಗೆ ಅಗಸ್ಟ್ 16 ಕೊನೆಯ ದಿನ ನಿಗದಿ ಪಡಿಸಿದ್ದಾರೆ. ಈ ಬಾರಿ ಮುಂಗಾರು ಹಂಗಾಮಿನ ಬೆಳೆವಿಮೆಗೆ ಹೆಸರು ನೋಂದಾಯಿಸಲು ಕೊನೇಯ ದಿನಾಂಕ ಘೋಷಣೆಯಾಗಿರುವುದು ರೈತರ ಕಣ್ಣು ಕೆಂಪಾಗುವಂತೆ ಮಾಡಿದೆ. ಹೆಸರು ಬೆಳೆ ಒಂದು ಎಕರೆಗೆ 41 ಕೆ.ಜಿ. ಬಂದರೆ ಬೆಳೆವಿಮೆ ನೀಡಲಾಗುವುದಿಲ್ಲ ಎಂದು ರೈತರಿಗೆ ಶಾಕ್ ನೀಡಿದೆ. ಸರ್ಕಾರ ಹಾಗೂ ವಿಮೆ ಕಂಪನಿಗಳು ರೈತರಿಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿವೆ ಎಂದು ಅಳಲು ತೋಡಿಕೊಂಡರು.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ, ಜುಲೈ 15ರ ಒಳಗೆ ರೈತರ ಖಾತೆಗೆ ಉಳಿದ ಹಣ ಜಮಾ ಮಾಡುವಂತೆ ಜಿಲ್ಲಾಧಿಕಾರಿಗಳು ಬಜಾಜ್ ವಿಮಾ ಕಂಪನಿಗೆ ಸೂಚಿಸಿದ್ದಾರೆ. ಆದಷ್ಟು ಬೇಗ ಪರಿಹಾರ ನೀಡಲು ನಾವೂ ಒತ್ತಾಯ ಮಾಡುತ್ತಿದ್ದೆವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.