– ಕೊಡಗು, ಕಾರವಾರದಲ್ಲಿ ಗುಡ್ಡ ಕುಸಿತ
ಬೆಂಗಳೂರು: ರಾಜ್ಯದಲ್ಲಿ ಮಳೆ ಕಡಿಮೆ ಆಗಿದೆ. ಆದರೆ ಪ್ರವಾಹ ಅವಾಂತರಗಳು ಮಾತ್ರ ನಿಲ್ತಿಲ್ಲ. ಮಹಾರಾಷ್ಟ್ರದ ಕಾರಣದಿಂದ ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಕೃಷ್ಣಾ ನದಿ ಅಬ್ಬರಕ್ಕೆ ಚಿಕ್ಕೋಡಿ, ರಾಯಭಾಗದ 25ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ.
ಅಥಣಿ, ಕಾಗವಾಡದ 30ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಿದೆ. ಸವದಿ ಗ್ರಾಮದಲ್ಲಿ ಪ್ರವಾಹಕ್ಕೆ 55 ವರ್ಷದ ರಾಮನಗೌಡ ಎಂಬ ವೃದ್ಧ ಬಲಿಯಾಗಿದ್ದಾರೆ. ಹಿರಣ್ಯಕೇಶಿ, ದೂದ್‍ಗಂಗಾ, ವೇದ್‍ಗಂಗಾ ನದಿ ಅಬ್ಬರಕ್ಕೆ ಸಾವಿರಾರು ಹೆಕ್ಟೇರ್‍ನಲ್ಲಿ ಬೆಳೆದಿದ್ದ ಬೆಳೆ ಜಲಾವೃತಗೊಂಡಿದೆ. ಆಲಮಟ್ಟಿ ಡ್ಯಾಂನಿಂದ ನೀರಿ ಬಿಡುಗಡೆಯಾಗ್ತಿರೋದ್ರಿಂದ ವಿಜಯಪುರದಲ್ಲಿ ಪ್ರವಾಹ ಭೀತಿ ಎದುರಾಗಿದ್ರೆ, ಬಾಗಲಕೋಟೆಯ ಚಿಕ್ಕಪಡಲಸಗಿ ಸೇತುವೆ ಮುಳುಗಡೆಯಾಗಿದೆ.
ಕೊಡಗಿನ ಕೂಡುಮಂಗಳೂರಿನಲ್ಲಿ ಬೃಹತ್ ಗಾತ್ರದ ಬಂಡೆಗಳು ಮನೆಗೆ ಅಪ್ಪಳಿಸಿವೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಸಾವು ತಪ್ಪಿದೆ. ಕಾರವಾರ-ಬೆಳಗಾವಿ ಹೆದ್ದಾರಿಯು ಹಾದುಹೋಗುವ ಅಣಶಿ ಭಾಗದಲ್ಲಿ ನಾಲ್ಕು ಕಡೆ ಗುಡ್ಡ ಕುಸಿದಿದೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ. ಟಿಬಿ ಡ್ಯಾಂನಿಂದ ಅಪಾರ ಪ್ರಮಾಣದ ನಿರು ಹೊರಬಿಟ್ಟ ಹಿನ್ನೆಲೆಯಲ್ಲಿ ಕಂಪ್ಲಿ-ಗಂಗಾವತಿ ಸೇತುವೆ ಮುಳುಗಡೆಯಾಗಿದೆ.
ರಾಯಚೂರಿನ ಎಲೆಬಿಚ್ಚಾಲಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಜಪದಕಟ್ಟೆಗೆ ನೀರು ನುಗ್ಗಿದೆ. ಅಪ್ಪಣಾಚಾರ್ಯರ ವೃಂದಾವನ ಮುಳುಗಡೆಯಾಗಿದೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಬೃಹತ್ ಅರಳಿ ಮರವೊಂದು 3 ಭಾಗವಾಗಿ ಸೀಳಿ ಧರೆಗುರುಳಿದೆ. ಚಿಕ್ಕಮಗಳೂರಿನ ಮಲ್ಲಂದೂರಿನಲ್ಲಿ 4 ದಿನದ ಹಿಂದೆ ಹಳ್ಳದಲ್ಲಿ ಕೊಚ್ಚಿಹೋಗಿದ್ದ 52 ವರ್ಷದ ಮುಳ್ಳಯ್ಯನ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ.
ಈ ಮಧ್ಯೆ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಎನ್‍ಡಿಆರ್‍ಎಫ್ ನಿಧಿಯಡಿ 629.03 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರಕ್ಕೆ 700 ಕೋಟಿ ರೂಪಾಯಿಯನ್ನು ಕೇಂದ್ರ ರಿಲೀಸ್ ಮಾಡಿದೆ.