– ಪೆಟ್ರೋಲ್ ಬಂಕ್‍ಗೆ ನುಗ್ಗಿ ಬೆಂಬಲಿಗರಿಂದ ಗೂಂಡಾಗಿರಿ
– ಕಾರಿಗೆ ಕೈಯಿಂದ ಗುದ್ದಿ, ಕಾಲಿನಿಂದ ಒದ್ದು ಪ್ರತಿಭಟನೆ
ಬೆಳಗಾವಿ: ರಾಸಲೀಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ಮಾಜಿ ಸಚಿವರ ಬೆಂಬಲಿಗರಿಂದ ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ ಅವರ ವಿರುದ್ಧ ಗೋಕಾಕ್‍ನಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಮದಾಪೂರ ಹಾಗೂ ಹಿರೇನಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ 11 ಗ್ರಾಮಗಳಿಂದ ಬೆಂಬಲಿಗರು ಬಂದಿದ್ದು, ಪ್ರತಿಭಟನೆ ಮಾಡುತ್ತಿದ್ದಾರೆ. ಸ್ಥಳದಲ್ಲಿ ಬಿಗಿವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೊಬಸ್ತ್ ನೀಡಲಾಗಿದೆ.
ಮಮದಾಪೂರ ಕ್ರಾಸ್ ಬಳಿ ಬೆಂಬಲಿಗರು ಪೆಟ್ರೋಲ್ ಬಂಕ್‍ಗೆ ನುಗ್ಗಿ ಗೂಂಡಾಗಿರಿ ನಡೆಸಿದ್ದಾರೆ. ಒತ್ತಾಯಪೂರ್ವಕವಾಗಿ ಅವಾಚ್ಯವಾಗಿ ನಿಂದಿಸಿ ಬಂಕ್ ಬಂದ್ ಮಾಡಿಸಿದ್ದಾರೆ. ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಮಹಾರಾಷ್ಟ್ರ ಮೂಲದ ಕಾರ್ ಬರುತ್ತಿದ್ದಂತೆ ಆಕ್ರೋಶಭರಿತರಾದ ಪ್ರತಿಭಟನಾಕಾರರು, ಕಾರಿಗೆ ಕೈಯಿಂದ ಗುದ್ದಿ, ಕಾಲಿನಿಂದ ಒದ್ದಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಅಲ್ಲದೆ ಮಾಜಿ ಸಚಿವರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಬೆಂಬಲಿಗರು ದಿನೇಶ್ ಕಲ್ಲಹಳ್ಳಿ ಅವರ ಅಣಕು ಶವಯಾತ್ರೆಯನ್ನು ಮಾಡಿ ಸುಟ್ಟು ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ನಾಯಕರು ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದರು. ಆದರೆ ಅವರ ವಿರುದ್ಧ ಸುಳ್ಳು ಸಿಡಿಯನ್ನು ಸೃಷ್ಟಿಸಿ ರಾಜಕೀಯ ಪೀತೂರಿಯನ್ನು ಮಾಡಿದ್ದಾರೆ. ಸತ್ಯ ಹೊರಬೇಕು ಎಂದರೆ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು. ತನಿಖೆಯಾದ ನಂತರ ಮತ್ತೆ ಅವರ ಖಾತೆಯನ್ನು ಅವರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ಕಾಣದ ಕೈಗಳು ಪಿತೂರಿ ಮಾಡುತ್ತಿವೆ. ಹೀಗಾಗಿ ಸಂಬಂಧ ಸಂಪೂರ್ಣ ತನಿಖೆಯಾಗಬೇಕು ಅಲ್ಲಿಯವರೆಗೂ ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.