– ಸಿಎಂ ಬಗ್ಗೆ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ
ಬೆಂಗಳೂರು: ಉಪ ಚುನಾವಣಾ ಕಣ ರಂಗೇರಿದೆ. ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಿಎಂ ಯಡಿಯೂರಪ್ಪ, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವರು ಉಪಸ್ಥಿತರಿದ್ರು.
Advertisement
ಆದರೆ ಸಿಡಿ ಪ್ರಕರಣದ ಆರೋಪಿ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಗೈರು ಎದ್ದು ಕಾಣುತ್ತಿತ್ತು. ನಂತರ ನಡೆದ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಮಂಗಳಾ ಅಂಗಡಿಯನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ರು.
Advertisement
Advertisement
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಈ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಳ್ಳುತ್ತೆ ಎಂದು ಭವಿಷ್ಯ ನುಡಿದ್ರು. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಬ್ಲಾಕ್‍ಮನಿ ಮಾಡುತ್ತೆ, ಅಧಿಕಾರ ಕಳೆದುಕೊಂಡ ಮೇಲೆ ಬ್ಲಾಕ್‍ಮೇಲ್ ಮಾಡುತ್ತೆ ಎಂದು ಟೀಕಿಸಿದ್ರು.
Advertisement
ಬೆಳಗಾವಿಯಲ್ಲಿ ಕಾಂಗ್ರೆಸ್‍ಗೆ ಅಭ್ಯರ್ಥಿ ಸಿಗಲಿಲ್ಲ. ಸತೀಶ್ ಜಾರಕಿಹೊಳಿಯವರನ್ನ ನಿಲ್ಲಿಸಿದ್ದಾರೆ. ಡಿಕೆಶಿ – ಸಿದ್ದರಾಮಯ್ಯ ಒಬ್ಬರನ್ನೊಬ್ಬರು ಹೊಡೆಯಲು ಕಾಯ್ತಿದ್ದಾರೆ ಎಂದು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಟೀಕಿಸಿದ್ರು. ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಬೆಳಗಾವಿಯಲ್ಲೇ ಉಳಿದುಕೊಳ್ಳಬೇಕಿತ್ತು. ಆದರೆ ದಿಢೀರ್ ಎಂದು ಬೆಳಗಾವಿ ಪ್ರವಾಸ ಮೊಟಕು ಮಾಡಿದ ಸಿಎಂ ಬೆಂಗಳೂರಿಗೆ ವಾಪಸ್ ಆಗಿದ್ದು ಚರ್ಚೆಗೆ ಗ್ರಾಸವಾಯ್ತು.
ಇತ್ತ ಬಸವಕಲ್ಯಾಣ ಉಪ ಚುನಾವಣಾ ಕಣವೂ ರಂಗೇರಿದೆ. ಕಾಂಗ್ರೆಸ್ ಕ್ಯಾಂಡಿಡೇಟ್ ಮಲ್ಲಮ್ಮ, ಬಿಜೆಪಿ ಅಭ್ಯರ್ಥಿ ಶರಣು ಸಲಗಾರ್, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ನಾಮಪತ್ರ ಸಲ್ಲಿಸಿದ್ರು. ಆದರೆ ನಂತರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಸಿಎಂ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರು.
ನಿನ್ನೆ ಸಂಸದರನ್ನು ಗುಲಾಮರು ಎಂದು ಕರೆದಿದ್ದ ಸಿದ್ದರಾಮಯ್ಯ, ಇಂದು ಸಿಎಂ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ರು. ಕೇಂದ್ರದಿಂದ ರಾಜ್ಯದ ಪಾಲು ಪಡೆಯಲು ಮುಖ್ಯಮಂತ್ರಿಗೆ ಗಂ.. ಇಲ್ಲ ಎಂದು ಕಿಡಿ ಕಾರಿದ್ರು. ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮೋದಿ ದೇಶ ಹಾಳು ಮಾಡ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕರು ಮನೆ ಹಾಳು ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದುಡ್ಡಿಲ್ಲ.. ಎಲೆಕ್ಷನ್‍ಗೆ ಅಭ್ಯರ್ಥಿ ಹಾಕಲ್ಲ ಎನ್ನುತ್ತಿದ್ದ ಕುಮಾರಸ್ವಾಮಿಗೆ ಇಲ್ಲಿ ಅಭ್ಯರ್ಥಿ ಹಾಕಲು ಎಲ್ಲಿಂದ ದುಡ್ಡು ಬಂತು. ದಲ್ಲಾಳಿ ಕೆಲಸ ಮಾಡಿದ್ದಕ್ಕೆ ದುಡ್ಡು ಬಂತಾ ಎಂದು ಶಾಸಕ ಜಮೀರ್ ಅಹ್ಮದ್ ಪ್ರಶ್ನಿಸಿದ್ರು. ಕುಮಾರಸ್ವಾಮಿ ಬಿಜೆಪಿ ಏಜೆಂಟ್ ಆಗಿದ್ದಾರೆ ಎಂದು ಜಮೀರ್ ಅಹ್ಮದ್ ಆರೋಪಿಸಿದ್ರು. ಈ ಮಧ್ಯೆ ಪಿ.ಜಿ.ಆರ್ ಸಿಂಧಿಯಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿಕೊಂಡಿದ್ದಾರೆ.