– ವಿಮಾನ ನಿಲ್ದಾಣದ ಬಳಿ ಪರಿಸ್ಥಿತಿ ಉದ್ವಿಗ್ನ, ಲಾಠಿ ಚಾರ್ಜ್
– ಜಾರಕಿಹೊಳಿ ಬಂಬಲಿಗರನ್ನು ವಶಕ್ಕೆ ಪಡೆದ ಪೊಲೀಸರು
ಬೆಳಗಾವಿ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ಹೋರಾಟ ತಾರಕಕ್ಕೇರಿದೆ. ಹೀಗಿರುವಾಗಲೇ ಚುನಾವಣಾ ಪ್ರಚಾರಕ್ಕಾಗಿ ಡಿಕೆಶಿ ಇಂದು ಬೆಳಗಾವಿಗೆ ತೆರಳಿದ್ದು, ಜಾರಕಿಹೊಳಿ ಬೆಂಬಲಿಗರು ಗಲಾಟೆ ಮಾಡಿದ್ದಾರೆ. ವಿಮಾನ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ, ಡಿಕೆಶಿ ಎಸ್ಕಾರ್ಟ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಇಂದು ಡಿ.ಕೆ.ಶಿವಕುಮಾರ್ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪ್ರತಿಭಟನೆ ಬಿಸಿ ತಟ್ಟಿದ್ದು, ರಮೇಶ್ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏರ್ ಪೋರ್ಟ್ ಹೊರಭಾಗದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿ, ಡಿಕೆಶಿ ವಾಹನಗಳನ್ನು ತಡೆದು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ರಮೇಶ್ ಜಾರಕಿಹೊಳಿ ಬೆಂಬಲಿಗರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.
ವಿಮಾನ ನಿಲ್ದಾಣದ ಬಳಿ ತೀವ್ರ ಗಲಾಟೆ ಉಂಟಾಗಿದ್ದು, ಡಿಕೆಶಿ ಎಸ್ಕಾರ್ಟ್ ವಾಹನಗಳ ಮೇಲೆ ಕಲ್ಲು ತೂರಾಟ ಸಹ ನಡೆಸಲಾಗಿದೆ. ಕೆಲ ರಮೇಶ್ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ವಿಮಾನ ನಿಲ್ದಾಣದ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಬೆಳಗಾವಿಗೆ ಆಗಮಿಸುವುದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ಪ್ರಕರಣದಲ್ಲಿ ಪೊಲೀಸರು ತಮ್ಮ ಗೌರವ ಕಾಪಾಡಿಕೊಳ್ಳಲಿ ಎಂದು ಎಸ್‍ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ್ದ ಡಿಕೆಶಿ, ಯಾವ ಘನಕಾರ್ಯ ಮಾಡಿದ್ದಾರೆ ಎನ್ನುವುದಕ್ಕೆ ಪ್ರತಿಭಟನೆ ಮಾಡುತ್ತಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಭೇಟಿ ನೀಡುತ್ತೇನೆ. ನನಗೆ ಯಾವ ಭದ್ರತೆಯೂ ಬೇಡ ಎಂದು ಹೇಳಿದ್ದರು.
ಅವರು ಏನ್ ಏನೋ ಹೇಳಿಕೆ ಕೊಟ್ಟು ಎಷ್ಟೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲೆಲ್ಲಿಂದನೋ ಕರೆದುಕೊಂಡು ಬಂದು ಹೇಳಿಕೆಯನ್ನು ಕೊಡಿಸುತ್ತಿದ್ದಾರೆ. ಪೋಲಿಸರು ತನ್ನ ಗೌರವವನ್ನು ಕಾಪಾಡಿಕೊಳ್ಳಲಿ, ಸರ್ಕಾರ ಏನು ಮಾಡಿಕೊಳ್ಳುತ್ತೋ ಮಾಡಿಕೊಳ್ಳಲಿ. ನಾನು ಮಾನಹಾನಿ ಕೇಸ್ ಹಾಕಲ್ಲ. ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಮಾಡಲಿ. ಪೋಷಕರು ದೂರು ಕೊಟ್ಟಿದ್ದಾರೆ ಕೊಡಲಿ. ಅದಕ್ಕೆ ಮಹಿಳೆ ವೀಡಿಯೋ ಮೂಲಕವಾಗಿ ಉತ್ತರಿಸಿದ್ದಾಳೆ. ತನಿಖೆ ಆಗುತ್ತದೆ ಸತ್ಯ ಹೊರಗೆ ಬರುತ್ತದೆ ಎಂದು ಹೇಳಿದ್ದಾರೆ.
ಸೋಮವಾರ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಲೋಕಸಭಾ ಉಪಚುನಾವಣೆಗೆ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಿಂದ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಆಗಮಿಸಿದ್ದಾರೆ.