ಶಿವಮೊಗ್ಗ: ಪೆಟ್ರೋಲ್, ಡೀಸೆಲ್ ದರ ದಿನೇ ದಿನೇ ಏರಿಕೆಯಾಗುತ್ತಿದ್ದು, ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರ ನಡುವೆ ಪೆಟ್ರೋಲ್ ಕಳ್ಳರ ಹಾವಳಿ ಸಹ ಹೆಚ್ಚಾಗುತ್ತಿದ್ದು, ನಗರದ ಪುರ್ಲೆ ಬಡಾವಣೆಯಲ್ಲಿ ಒಂದೇ ದಿನ 30ಕ್ಕೂ ಹೆಚ್ಚು ಬೈಕುಗಳ ಪೈಪ್ ಕತ್ತರಿಸಿ ಪೆಟ್ರೋಲ್ ಕಳ್ಳತನವಾಗಿದೆ.
ಶಿವಮೊಗ್ಗ ನಗರದ ಪುರ್ಲೆ ಬಡಾವಣೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಪೆಟ್ರೋಲ್ ಕಳ್ಳತನ ನಡೆದಿದೆ. ಈ ಬಡಾವಣೆಯ ಎರಡ್ಮೂರು ಬೀದಿಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು 30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಪೆಟ್ರೋಲ್ ಪೈಪ್ ಕತ್ತರಿಸಿರುವ ಖದೀಮರು ಪೆಟ್ರೋಲ್ ಕಳ್ಳತನ ನಡೆಸಿದ್ದಾರೆ.
ಮೊದಲೇ ಕೋವಿಡ್ ಸಂಕಷ್ಟದಲ್ಲಿ ಜನ ಪರದಾಡುತ್ತಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಯಾಗಿ ವಾಹನಗಳಲ್ಲಿ ಸಂಚಾರ ನಡೆಸುವುದೇ ದುಸ್ತರವಾಗಿದೆ. ಇಂತಹದರಲ್ಲಿ ಪೆಟ್ರೋಲ್ ಕಳ್ಳತನ ನಡೆಯುತ್ತಿದೆ. ಪೊಲೀಸರು ಈ ಕೂಡಲೇ ದುಷ್ಕರ್ಮಿಗಳ ಪತ್ತೆ ಹಚ್ಚುವಂತೆ ಹಾಗೂ ರಾತ್ರಿ ವೇಳೆ ಬೀಟ್ ಪೊಲೀಸರ ಗಸ್ತು ಹೆಚ್ಚಿಸುವಂತೆ ಬಡಾವಣೆ ನಿವಾಸಿಗಳು ಮನವಿ ಮಾಡಿದ್ದಾರೆ.
ಘಟನೆ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.