ಚಿಕ್ಕಮಗಳೂರು: ಕಳೆದ ಒಂದು ವರ್ಷದಿಂದ ಮೂರು ಬಾರಿ ಎಲೆ ಕೋಸ್ ಬೆಳೆದಿದ್ದು, ಒಂದು ಬಾರಿಯೂ ಲಾಭವಿಲ್ಲ, ಹಾಕಿದ ಬಂಡವಳವೂ ಬಂದಿಲ್ಲ. ಬರೀ ನಷ್ಟವಾಗಿದೆ ಎಂದು ಮನನೊಂದ ರೈತ ಎರಡು ಎಕರೆಯಲ್ಲಿ ಬೆಳೆದ ಕೋಸಿಗೆ ಟ್ರ್ಯಾಕ್ಟರ್ ಹರಿಸಿ ಗೊಬ್ಬರವಾಗಿಸಿದ್ದಾನೆ.
Advertisement
ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ರೈತ ಬಸವರಾಜ್ ಎರಡು ಎಕರೆ ಹೊಲದಲ್ಲಿ ಕೋಸ್ ಬೆಳೆದಿದ್ದರು. ಕೋಸಿನ ಫಸಲು ಉತ್ತಮವಾಗಿದೆ, ಆದರೆ ಬೆಲೆ ಇಲ್ಲ. ಮಾರ್ಕೆಟ್‍ಗೆ ತಂದರೆ 10 ಕೆಜಿಯ ಚೀಲಕ್ಕೆ 30-40 ರೂಪಾಯಿಗೆ ಕೇಳುತ್ತಾರೆ. ಕೋಸ್ ಕೊಯ್ದ ಕೂಲಿ ಕೊಡೋದಕ್ಕೂ ಆಗಲ್ಲ, ಮತ್ತೆ ಸಾಲ ಮಾಡಬೇಕು. ಹೀಗಾಗಿ ರೈತ ಬಸವರಾಜ್ ಎರಡು ಎಕರೆ ಹೊಲಕ್ಕೂ ಟ್ರ್ಯಾಕ್ಟರ್ ಹೊಡೆದು ಕೋಸ್ ಬೆಳೆ ನಾಶಪಡಿಸಿದ್ದಾರೆ.
Advertisement
Advertisement
ಬಸವರಾಜ್ ಇದೇ ಮೊದಲ ಬಾರಿ ಕೋಸ್ ಬೆಳೆದಿಲ್ಲ. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಕೋಸ್ ಬೆಳೆದಿದ್ದಾರೆ. ಪ್ರತಿ ಸಲವೂ ಇದೇ ರೀತಿಯಾಗುತ್ತಿದ್ದು, ಲಾಭವಿರಲಿ, ಹಾಕಿದ ಬಂಡವಾಳ ಕೂಡ ಬಂದಿಲ್ಲ. ಪ್ರತಿ ಸಲ ಎಕರೆಗೆ 2-30 ಸಾವಿರದಂತೆ ಖರ್ಚು ಮಾಡಿ ಬೆಳೆದ ರೈತ ನಷ್ಟದಿಂದ ಕೈ ಸುಟ್ಟುಕೊಂಡಿದ್ದಾರೆ. ಕೆಲ ಬಾರಿ ಮಧ್ಯವರ್ತಿಗಳೇ ಹೊಲಗದ್ದೆಗಳಿಗೆ ಬಂದು ಹಣ ನೀಡಿ ಖರೀದಿಸಿ ಹೋಗುತ್ತಿದ್ದರು. ಈಗ ಮಧ್ಯವರ್ತಿಗಳೂ ಬರುತ್ತಿಲ್ಲ. ರೈತರೇ ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಮನ ಬಂದಂತೆ ದರ ನಿಗದಿಪಡಿಸುತ್ತಾರೆ. ಒಂದು ಚೀಲಕ್ಕೆ 30-40 ರೂಪಾಯಿ ನೀಡಿದರೆ ಹೇಗೆ ಎಂಬುದು ರೈತರ ಆತಂಕವಾಗಿದೆ.
Advertisement
ಮೂರು-ನಾಲ್ಕು ತಿಂಗಳಿಂದ ನೀರು ಹಾಯಿಸಿ ಹಗಲಿರುಳು ಕಾದು ಬೆಳೆದ ಬೆಳೆಗೆ ಬೆಲೆ ಇಲ್ಲ, ಹಾಕಿದ ಬಂಡವಾಳವೂ ಬಂದಿಲ್ಲ. ಹಣ ಬರದಿದ್ದರೂ ಪರವಾಗಿಲ್ಲ ಭೂಮಿಗೆ ಗೊಬ್ಬರವಾದರೂ ಆಗಲಿ ಎಂದು ಇಡೀ ಎರಡು ಎಕರೆ ಹೊಲದ ತುಂಬಾ ಟ್ರ್ಯಾಕ್ಟರ್ ಹೊಡೆಸಿದ್ದಾರೆ. ಹೊಲದ ತುಂಬ ಉತ್ತಮ ಸೈಜಿನ ಕೋಸು ನಳನಳಿಸುತ್ತಿದೆ. ಆದರೆ ಬೆಲೆ ಸಿಗದೆ ರೈತ ಕಂಗಾಲಾಗಿದ್ದಾನೆ.
ಲಾಕ್‍ಡೌನ್ ವೇಳೆ ಕೆಲಸವಿಲ್ಲದೆ, ಹಣವಿಲ್ಲದೆ ಸಾಲ ಮಾಡಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೆ, ಮತ್ತೆ ಸಾಲದ ಭಯ ಕಾಡಿದೆ. ಈ ಮಧ್ಯೆ ಗಗನ ಮುಟ್ಟಿರೊ ಬೀಜ ಹಾಗೂ ಗೊಬ್ಬರದ ದರ ರೈತರನ್ನ ಮತ್ತಷ್ಟು ಕಂಗಾಲಾಗಿಸಿದೆ.