ಬೆಂಗಳೂರು: ಬೆದರಿಕೆ ಇರುವುದರಿಂದ ಸಂತ್ರಸ್ತೆ ಎಲ್ಲೂ ಹೊರಗೆ ಬರುತ್ತಿಲ್ಲ. ನನಗೆ ಭಯ ಆಗುತ್ತಿದೆ ದೂರು ನೀಡಿ ಎಂದು ಮನವಿ ಮಾಡಿದರು. ಹೀಗಾಗಿ ನಾನು ದೂರು ನೀಡಲು ಬಂದಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಭೇಟಿ ಬಳಿಕ ಮಾತನಾಡಿದ ಅವರು, ಇದು ತುಂಬಾ ಸೂಕ್ಷ್ಮವಾದ ವಿಚಾರ ಆಗಿರುವ ಕಾರಣ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಂತ್ರಸ್ತೆಗೆ ಭಾರೀ ಪ್ರಮಾಣದಲ್ಲಿ ಬೆದರಿಕೆ ಕರೆಗಳು ಬರುತ್ತಿವೆ. ಒಂದೆರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಬಳಿಕ ಬೆದರಿಕೆ ಕರೆಗಳು ಬರುತ್ತಿವೆ. ಹೀಗಾಗಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ತಿಳಿಸಿದರು.
ಆಯುಕ್ತರನ್ನು ಭೇಟಿ ಮಾಡಿದ ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತಿಳಿಸಿದ್ದಾರೆ. ಹೀಗಾಗಿ ದೂರು ನೀಡಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳುತ್ತಿದ್ದೇನೆ ಎಂದರು.
ಕುಟುಂಬದ ಸದಸ್ಯರೊಬ್ಬರು ಆಗಮಿಸಿ ಸೋಮವಾರ ನನಗೆ ಸಿಡಿ ನೀಡಿದರು. ಕಿರು ಚಿತ್ರ ನಿರ್ಮಾಣಕ್ಕೆಂದು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದಾಗ ಕೆಪಿಟಿಸಿಎಲ್‍ನಲ್ಲಿ ಕೆಲಸ ನೀಡುವುದಾಗಿ ಹೇಳಿಕೆ ನೀಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ನನಗೆ ತುಂಬಾ ನೋವು ಕೊಟ್ಟಿದ್ದಾರೆ. ನನ್ನಿಂದ ಅವರ ವಿರುದ್ಧ ಹೋರಾಟ ಮಾಡಲು ಆಗುತ್ತಿಲ್ಲ. ನ್ಯಾಯ ಕೊಡಿಸಿ ಎಂದು ನನ್ನ ಬಳಿ ಮನವಿ ಮಾಡಿದರು. ನಾನು ನಮ್ಮ ವಕೀಲರ ಜೊತೆ ಚರ್ಚೆ ನಡೆಸಿ, ಇದೀಗ ದೂರು ನೀಡಲು ಬಂದಿದ್ದೇನೆ ಎಂದು ತಿಳಿಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ಈ ರೀತಿ ಮಾಡುವುದು ಅಕ್ಷಮ್ಯ ಅಪರಾಧ, ಈ ಬಗ್ಗೆ ಸಮಗ್ರ ತನಿಖೆಯಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಅವರು ತಿಳಿಸಿದರು. ಪೊಲೀಸರು ಸಂತ್ರಸ್ತೆಯನ್ನು ಕರೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.