ನವದೆಹಲಿ: ಬೆಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬೆಂಗಳೂರಿನ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ವಿಚಾರಣೆ ಸಂಬಂಧ ಪ್ರತಿಕ್ರಿಯಿಸಿ, ಉದ್ದೇಶಪೂರ್ವಕವಾಗಿ ನಮ್ಮ ನಾಯಕರ ವಿಚಾರಣೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಪಾತ್ರ ಇದೇ ಎಂದು ಸಾಬೀತು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಹುಳುಕು ಮುಚ್ಚಿಕೊಳ್ಳಲು ಈ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಪಕ್ಷದ ನಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ಕಾಂಗ್ರೆಸ್ ಮೇಲೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ನಾನು ಪೊಲೀಸ್ ಮೂಲಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ನಮ್ಮ ನಾಯಕರದ್ದು ಯಾವುದೇ ಪಾತ್ರ ಈ ಪ್ರಕರಣದಲ್ಲಿಲ್ಲ ಎಂದರು.
ನನಗಿರುವ ಮಾಹಿತಿ ಪ್ರಕಾರ, ನವೀನ್ ಬಿಜೆಪಿ ಕಾರ್ಯಕರ್ತ. ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮುಖ್ಯ, ಈ ಅಂಶವನ್ನೇ ನವೀನ್ ಹಂಚಿಕೊಂಡಿದ್ದಾರೆ. ನನಗೆ ಶುಭಾಶಯ ಕೋರಿದಾಕ್ಷಣ ಕಾಂಗ್ರೆಸ್ ಕಾರ್ಯಕರ್ತ ಅಲ್ಲ. ನವೀನ್ ಮೇಲೆ ಆರೋಪ ಬಂದಾಗ ಯಾಕೆ ಬಂಧಿಸಿಲ್ಲ ಎಂದು ಪೊಲೀಸರನ್ನು ಕೇಳಿ. ಶಾಸಕರಿಗೆ ರಕ್ಷಣೆ ನೀಡಲು ಸರ್ಕಾರಕ್ಕೆ ಸಾಧ್ಯವಾಗಲ್ಲ. ಬಿಜೆಪಿ, ದಲಿತ ಹೆಸರಿನ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಎರಡನೇ ಹಂತದಲ್ಲಿ ಆಪರೇಷನ್ ಕಮಲ ವಿಚಾರದ ಸಂಬಂಧ ಪ್ರತಿಕ್ರಿಯಿಸಿ, ಬಿಜೆಪಿ ಮತ್ತೊಂದು ಆಪರೇಷನ್ ಮಾಡಿದ್ರೆ ಸ್ವಾಗತ. ಎಷ್ಟು ಜನರನ್ನು ಆಪರೇಷನ್ ಮಾಡ್ತಾರೆ ಮಾಡಲಿ. ಅವರು ಎಲ್ಲ ಶಾಸಕರ ಸಂಪರ್ಕದಲ್ಲಿದ್ದಾರೆ. ನನ್ನನೂ ಸೇರಿದಂತೆ 224 ಶಾಸಕರ ಸಂಪರ್ಕದಲ್ಲಿದ್ದಾರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.