ಬೆಂಗಳೂರು: ಯಾರೂ ಬೆಂಗಳೂರು ಬಿಟ್ಟು ಹೋಗಬೇಡಿ. ಒಂದು ವೇಳೆ ಹೋಗಲೇಬೇಕು ಎಂದುಕೊಂಡಿರುವವರು ಇವತ್ತೇ ಹೋಗಿ ಬಿಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ಇವತ್ತು ಸಿಎಂ ನೇತೃತ್ವದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಡಿಸಿಗಳ ಸಭೆ ಇದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳನ್ನು ಲಾಕ್‍ಡೌನ್ ಮಾಡಲಾಗಿದೆ. ಬೇರೆ ಜಿಲ್ಲೆಗಳಲ್ಲೂ ಸಮಸ್ಯೆ ಗಂಭೀರ ಆಗಿದೆ. ಹೀಗಾಗಿ ಬೇರೆ ಜಿಲ್ಲೆಗಳಲ್ಲಿ ಯಾವ ತೀರ್ಮಾನ ಮಾಡಬೇಕು ಎಂದು ಸಿಎಂ ಚರ್ಚೆ ಮಾಡುತ್ತಾರೆ ಎಂದರು.
ಒಂದು ವಾರ ಬೆಂಗಳೂರು ಲಾಕ್‍ಡೌನ್ ಘೋಷಣೆ ಮಾಡಿದ ತಕ್ಷಣ ಸಾವಿರಾರು ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳತ್ತ ಹೋಗುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಆರ್.ಅಶೋಕ್, ದಯವಿಟ್ಟು ಬೆಂಗಳೂರು ಬಿಟ್ಟು ಯಾರೂ ಹೋಗಬೇಡಿ. ಒಂದು ವಾರ ಇಲ್ಲೇ ಇರಿ. ಅನಿವಾರ್ಯತೆ ಇದೆ ಹೋಗಲೇಬೇಕು ಅಂದರೆ ಮಾತ್ರ ಹೋಗಿ. ಆದರೆ ಹೋಗುವರು ಇವತ್ತೇ ಹೋಗಿ ಬಿಡಿ. ಇಲ್ಲಿಂದ ಜಿಲ್ಲೆಗಳಿಗೆ ಹೋಗುವರನ್ನು ಏನು ಮಾಡಬೇಕು ಅಂತ ಆಯಾ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳುತ್ತೆ ಎಂದರು.
ಪ್ರತಿ ಪಕ್ಷಗಳ ಬೆಂಬಲವನ್ನು ನಾವು ಕೋರುತ್ತಿದ್ದೇವೆ. ಈಗಾಗಲೇ ಬೆಂಗಳೂರು ಲಾಕ್‍ಡೌನ್‍ಗೆ ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾಜಿ ಪಿಎಂ ದೇವೇಗೌಡರ ಸಲಹೆಗಳನ್ನು ಪಾಲಿಸುತ್ತೇವೆ. ಲಾಕ್‍ಡೌನ್‍ನಿಂದ ಕಾರ್ಮಿಕರಿಗೆ, ಜನರಿಗೆ ಕಷ್ಟ ಆಗುತ್ತೆ. ಹೀಗಾಗಿ ಲಾಕ್‍ಡೌನ್ ಮಾಡುವುದಾದರೆ ಎಲ್ಲರ ಜೊತೆ ಚರ್ಚೆ ಮಾಡಿ ಸಿಎಂ ಯಡಿಯೂರಪ್ಪ ತೀರ್ಮಾನಿಸುತ್ತಾರೆ ಎಂದು ಅಶೋಕ್ ತಿಳಿಸಿದರು.
ಇನ್ನೂ ಕೊರೊನಾ ಗಂಭೀರ ಇರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್, ಈ ಜಿಲ್ಲೆಗಳಲ್ಲಿ ಡಿಸಿಗಳು ಮತ್ತು ತಜ್ಞರಿಂದ ವರದಿ ಪಡೆದು ಸಿಎಂ ನಿರ್ಧರಿಸುತ್ತಾರೆ. ಈ ಜಿಲ್ಲೆಗಳಲ್ಲಿ ಏಕಾಏಕಿ ಲಾಕ್‍ಡೌನ್ ಮಾಡಲ್ಲ. ತಜ್ಞರ ಅಭಿಪ್ರಾಯವನ್ನು ಪಡೆದುಕೊಂಡು ಸರಿಯಾದ ಚರ್ಚೆ ಮಾಡಿಯೇ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.