– ನಾವು 4 ‘ಸಿ’ಗಳನ್ನು ಅಳವಡಿಸಿಕೊಳ್ಳಬೇಕು
ಬೆಂಗಳೂರು: ರಾಜ್ಯದಲ್ಲಿ ಇಂದು 1,498 ಮಂದಿಗೆ ಕೊರೊನಾ ಪಾಟಿಸಿವ್ ದೃಢವಾಗಿದ್ದು, 15 ಮಂದಿ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.
ಆನ್‍ಲೈನ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ಇಂದು ಬೆಂಗಳೂರಿನಲ್ಲಿ 800 ಮಂದಿಗೆ ಕೊರೊನಾ ದೃಢವಾಗಿದ್ದು, ರಾಜ್ಯದಲ್ಲಿ 1,498 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇವತ್ತು 15 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸೋಮವಾರ 30 ಮಂದಿ ಮೃತಪಟ್ಟಿದ್ದರು ಎಂದು ತಿಳಿಸಿದರು.
Advertisement
Advertisement
ಸದ್ಯಕ್ಕೆ ರಾಜ್ಯದಲ್ಲಿ 14,385 ಸಕ್ರಿಯ ಪ್ರಕರಣಗಳಿದ್ದು, ಶೇ.1 ರಷ್ಟು ಮಾತ್ರ ಐಸಿಯುನಲ್ಲಿದ್ದಾರೆ. ಅಂದರೆ 143 ಜನ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಆಕ್ಸಿಜನ್, ಐಸಿಯು ಬೇಕಾಗಿದೆ. ಕೆಲವರಿಗೆ ವೆಂಟಿಲೇಟರ್ ಬೇಕಾಗಿದೆ. ಇದುವರೆಗೂ 10,527 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. 25,317 ಕೊರೊನಾ ಸೋಂಕಿತರ ಪೈಕಿ 14,385 ಸಕ್ರಿಯ ಪ್ರಕರಣಗಳಿಗೆ. ರಾಷ್ಟ್ರೀಯ ಮರಣ ಪ್ರಮಾಣ ಶೇ.2.79 ರಷ್ಟಿದ್ದು, ಬೆಂಗಳೂರಿನಲ್ಲಿ ಶೇ.1.46 ರಷ್ಟಿದೆ. ನಮ್ಮ ನಿರೀಕ್ಷೆ ಸಾವಿನ ಪ್ರಮಾಣವನ್ನು ಶೇ.1 ಕ್ಕಿಂತ ಕಡಿಮೆಗೆ ತರುವುದು. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
Advertisement
Advertisement
ಸೆಂಟ್ರಲ್ ತಂಡದಲ್ಲಿ ಆಗಮಿಸಿದ ಅಧಿಕಾರಿಗಳು ಇವತ್ತು ಭೇಟಿ ಮಾಡಿ ಚರ್ಚಿಸಿ, ಹಲವು ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಜನರು ಭಯ ಪಡಬಾರದು. ಸೋಂಕು ಹೆಚ್ಚು ಪತ್ತೆ ಮಾಡಿದಷ್ಟೂ ಕೊರೊನಾ ತಡೆಯಬಹುದು. ಟೆಸ್ಟ್ ಮಾಡದಿದ್ದರೆ ಸೋಂಕು ಸೈಲೆಂಟಾಗಿ ಹಬ್ಬುತ್ತೆ. ಇದಕ್ಕಾಗಿ ಹೆಚ್ಚು ಟೆಸ್ಟ್ ಮಾಡಬೇಕು. ಮನೆಯಲ್ಲಿರೋ ಹಿರಿಯರಿಗೆ ಐಎಲ್‍ಐ ಟೆಸ್ಟ್ ಮಾಡಲು ಸೂಚಿಸಲಾಗಿದೆ ಎಂದರು.
ನಾವು ನಾಲ್ಕು ‘ಸಿ’ ಗಳನ್ನು ಅಳವಡಿಸಿಕೊಳ್ಳಬೇಕು
1. ಕಾನ್ಫಿಡೆನ್ಸ್ – ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಇರಬೇಕು.
2. ಕೊಲ್ಯಾಬರೇಷನ್ – ನಮ್ಮಲ್ಲಿ ಸಹಭಾಗಿತ್ವ ಇರಬೇಕು. ಸರ್ಕಾರ ಮತ್ತು ನಾಗರೀಕರ ಸಹಭಾಗಿತ್ವದಲ್ಲಿ ಕೊರೊನಾ ನಿಯಂತ್ರಣ ಮಾಡಬಹುದು
3. ಕಮ್ಯುನಿಕೇಷನ್- ಜನರಿಗೆ ಸರಿಯಾದ ಮಾಹಿತಿ ಕೊಡಬೇಕು. ಜೊತೆಗೆ ಜನರು ಕೊರೊನಾ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು
4. ಕಂಪ್ಯಾಷನ್ – ಅನುಕಂಪ, ದಯೆ ಎಲ್ಲರ ಸಹಜ ಗುಣ ಆಗಬೇಕು
ಕೊರೊನಾಗೆ ವ್ಯಾಕ್ಸಿನ್ ಬಗ್ಗೆ ಮಾಹಿತಿ ಪಡೆಯಲು ಸಮಿತಿ ರಚಿಸುತ್ತೇವೆ. ಈ ಸಮಿತಿಯು ವಿಶ್ವದ ಎಲ್ಲೆಲ್ಲಿ ವ್ಯಾಕ್ಸಿನ್ ಪತ್ತೆ ಮಾಡುತ್ತಾರೆ. ಅದರ ಪರಿಣಾಮ ಬಗ್ಗೆ ಮಾಹಿತಿ ಕೊಡುತ್ತೆ. ನಮ್ಮ ರಾಜ್ಯದಲ್ಲೂ ವ್ಯಾಕ್ಸಿನ್ ತಯಾರಿಕೆಗೆ ಐಸಿಎಂಆರ್ ನಿಂದ ಅನುಮತಿ ಕೇಳುತ್ತೇವೆ. ಈ ಸಂಬಂಧ ಸದ್ಯವೇ ಐಸಿಎಂಆರ್‌ಗೆ ಪತ್ರ ಬರೆಯುತ್ತೇವೆ. ಅನುಮತಿ ಸಿಕ್ಕಿದರೆ ನಂಜನಗೂಡಿನ ಜ್ಯುಬಿಲಿಯೆಂಟ್ ಸಂಸ್ಥೆಯಲ್ಲಿ ಕೊರೊನಾ ವ್ಯಾಕ್ಸಿನ್ ತಯಾರಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
5077 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್‌ಗಳಿವೆ. ಇದರಲ್ಲಿ 3,777 ಹಾಸಿಗೆಗಳು ಭರ್ತಿ ಆಗಿವೆ. ಇನ್ನೂ 1,310 ಹಾಸಿಗೆಗಳು ಖಾಲಿ ಇವೆ. ಬೆಂಗಳೂರಿನಲ್ಲಿ ಹೆಚ್ಚುವರಿ 7,000 ಹಾಸಿಗೆಗಳನ್ನು ಸದ್ಯದಲ್ಲೇ ವ್ಯವಸ್ಥೆ ಮಾಡಲಾಗುತ್ತೆ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ನಾಳೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. ನಾಳೆ ಸಂಜೆ ಸುಮಾರು 4.30ಕ್ಕೆ ಸಭೆ ಇದೆ. ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಹಾಸಿಗೆಗಳ, ಐಸಿಯು ಬೆಡ್‌ಗಳ ಬಗ್ಗೆ ಮಾಹಿತಿ ತರುವುದಕ್ಕೆ ಸೂಚಿಸಲಾಗಿದೆ. ಸಚಿವ ಅಶೋಕ್ ಅವರು ಮಳೆ ಹಿನ್ನೆಲೆಯಲ್ಲಿ ಜಿಲ್ಲಾ ಪ್ರವಾಸ ಮಾಡುತ್ತಿದ್ದಾರೆ. ಹಾಗಾಗಿ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಲು ನನಗೆ ಸಿಎಂ ಸೂಚಿಸಿದ್ದಾರೆ. ಎಸ್.ಆರ್.ವಿಶ್ವನಾಥ್ ಸಹ ಸಭೆಯಲ್ಲಿ ಇರುತ್ತಾರೆ ಎಂದು ತಿಳಿಸಿದರು.
ಪ್ಲಾಸ್ಮಾ ಚಿಕಿತ್ಸೆ ಪಡೆದು ಗುಣಮುಖರಾದವರ ಜೊತೆಗೂ ಫೋನಿನಲ್ಲಿ ಮಾತಾಡಿಸಿದ್ದೇನೆ. ಅವರು ಸಹ ಪ್ಲಾಸ್ಮಾ ಚಿಕಿತ್ಸೆಯಿಂದ ಬದುಕಿರೋದಾಗಿ ಕೃತಜ್ಞತೆ ತಿಳಿಸಿದರು. ವಿಕ್ಟೋರಿಯಾದಲ್ಲಿ ಕೊರೊನಾ ಸೋಂಕಿತರ ಜೊತೆಗೂ ಮಾತನಾಡಿದ್ದೇನೆ. ಎಲ್ಲರೂ ಸರ್ಕಾರದ ವ್ಯವಸ್ಥೆ ಬಗ್ಗೆ ಮೆಚ್ಚುಗೆ ಮತ್ತು ಸಮಾಧಾನ ವ್ಯಕ್ತಪಡಿಸಿದರು ಎಂದು ಸುಧಾಕರ್ ಹೇಳಿದರು.