ಬೆಂಗಳೂರು: ಲಾಕ್‍ಡೌನ್ ಸಡಿಲಿಕೆಯಾಗುತ್ತಿದ್ದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಈ ಮಹಾಮಾರಿ ವೈರಸ್‍ಗೆ ಹೆಚ್ಚಿನ ಜನರು ಬಲಿಯಾಗುತ್ತಿದ್ದಾರೆ. ಇದೀಗ ಸಿಲಿಕಾಲ್ ಸಿಟಿಯಲ್ಲಿ ಕೊರೊನಾಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ. 61 ವರ್ಷದ ಮಹಿಳೆ ಮತ್ತು 57 ವರ್ಷದ ಪುರುಷ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆ ಆಗಿದೆ.
ಒಬ್ಬ ರೋಗಿ ರಾಜೀವ್ ಗಾಂಧಿ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಕಳುಹಿಸಲಾಗಿತ್ತು. ಮತ್ತೊಬ್ಬ ಸೆಂಟ್ ಮಾರ್ಥಾಸ್ ಆಸ್ಪತ್ರೆಯಿಂದ ವಿಕ್ಟೋರಿಯಾಗೆ ಶಿಫ್ಟ್ ಆಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಇಬ್ಬರು ಮೃತಪಟ್ಟಿದ್ದಾರೆ. ಕಳೆದ ದಿನವೂ ಬೆಂಗಳೂರು ನಗರದಲ್ಲಿ ನಾಲ್ವರು ಕೊರೊನಾಗೆ ಬಲಿಯಾಗಿದ್ದರು.
ರಕ್ತದೊತ್ತಡ, ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ ಬೆಂಗಳೂರಿನ 61 ವರ್ಷದ ಮಹಿಳೆ ಜೂನ್ 6 ರಂದು ಆಸ್ಪತ್ರೆಗೆ ದಾಖಲಾಗಿದ್ದು, 12 ರಂದು ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬೆಂಗಳೂರು ನಗರದ 52 ವರ್ಷದ ವ್ಯಕ್ತಿ ಮತ್ತು ಜ್ವರ, ಕೆಮ್ಮುನಿಂದ ಬಳಲುತ್ತಿದ್ದ 49 ವರ್ಷದ ಬೆಂಗಳೂರಿನ ಮಹಿಳೆ ಜೂನ್ 11 ರಂದು ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು ನಿವಾಸಿ 65 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ 11 ರಂದು ಮೃತಪಟ್ಟಿದ್ದಾರೆ.
ಶುಕ್ರವಾರ ಒಂದೇ ರಾಜ್ಯದಲ್ಲಿ ಕೊರೊನಾ ಏಳು ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 4 ಮಂದಿ, ಕಲಬುರಗಿಯಲ್ಲಿ 2, ಹಾಸನದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 60 ವರ್ಷದ ಹಾಸನದ ಪುರುಷ ಜೂನ್ 11 ರಂದು ಆಸ್ಪತ್ರೆಗೆ ದಾಖಲಾಗಿದ್ದು 12ರಂದು ನಿಧನರಾಗಿದ್ದಾರೆ. ಕಲಬುರಗಿಯ 53 ವರ್ಷ ಮತ್ತು 48 ವರ್ಷದ ಇಬ್ಬರು ಪುರುಷರಿಗೆ ಉಸಿರಾಟದ ಸಮಸ್ಯೆ ಇತ್ತು. ಇವರಿಬ್ಬರು ಜೂನ್ 9 ರಂದು ಆಸ್ಪತ್ರೆಗೆ ದಾಖಲಾಗಿ 10 ರಂದು ಮೃತಪಟ್ಟಿದ್ದಾರೆ.