ಚಾಮರಾಜನಗರ: ಕೊರೊನಾ ಲಾಕ್‍ಡೌನ್ ವೇಳೆ ನಗರ ಪ್ರದೇಶಗಳಿಂದ ತಮ್ಮ ತಮ್ಮ ಹುಟ್ಟೂರಿಗೆ ಬಂದು ಅನೇಕರು ಕೃಷಿ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಬೀಳು ಬಿದ್ದಿದ್ದ ಸುಮಾರು 4 ಸಾವಿರಕ್ಕೂ ಅಧಿಕ ಎಕರೆ ಜಮೀನಿನಲ್ಲಿ ಬೆಳೆ ಬೆಳೆಯಲಾಗಿದೆ.
ಉದ್ಯೋಗ ಅರಸಿ ಪಟ್ಟಣ ಪ್ರದೇಶಗಳಿಗೆ ಹಳ್ಳಿಗಳಿಂದ ಗುಳೆ ಹೋಗುವುದು ಸಾಮಾನ್ಯ. ಅದರಂತೆ ಚಾಮರಾಜನಗರ ಜಿಲ್ಲೆಯಿಂದಲೂ ಸಾವಿರಾರು ಕುಟುಂಬಗಳು ಬೆಂಗಳೂರು, ಮೈಸೂರು ಸೇರಿದಂತೆ ನಗರ ಪ್ರದೇಶಗಳಿಗೆ ವಲಸೆ ಹೋಗಿ ಅಲ್ಲೆ ಬದುಕು ಕಂಡುಕೊಂಡಿದ್ದವು. ಆದರೆ ಕೊರೊನಾ ಇವರೆಲ್ಲರ ಉದ್ಯೋಗಕ್ಕೆ ಕುತ್ತು ತಂದಿತ್ತು. ಆದ್ದರಿಂದ ನೂರಾರು ಜನ ಕೆಲಸ ಕಳೆದುಕೊಂಡು ತಮ್ಮ ತಮ್ಮ ಊರು ಸೇರಿದ್ದಾರೆ.
Advertisement
Advertisement
ತಮ್ಮ ಹುಟ್ಟೂರಿಗೆ ಬಂದು ಬದುಕು ಕಟ್ಟಿಕೊಳ್ಳಲು ಪ್ರಯಾಸ ಪಡುತ್ತಿದ್ದವರ ಕೈ ಹಿಡಿದಿದೆ ಕೃಷಿ. ಪರಿಣಾಮ ಬೀಳು ಬಿದ್ದಿದ್ದ ಜಮೀನುಗಳಿಗೆ ಜೀವ ಕಳೆ ಬಂದಿದೆ. ಚಾಮರಾಜನಗರನ ಜಿಲ್ಲೆಯ ವಿವಿದೆಡೆ ಬೀಳು ಬಿದ್ದಿದ್ದ 4,600ಕ್ಕೂ ಎಕರೆ ಪ್ರದೇಶದಲ್ಲಿ ಬೆಳೆಗಳು ನಳನಳಿಸುತ್ತಿವೆ.
Advertisement
ಕೃಷಿಯತ್ತ ಮರಳಿರುವ ಜನರಿಗೆ ಇಲಾಖೆಯಿಂದ ಸಿಗುವ ಸೌಲಭ್ಯ ಒದಗಿಸಿಕೊಡಲೂ ನಾವು ಸಿದ್ಧ. ಬೆಂಗಳೂರಿಗಿಂತ ಕೃಷಿಯೇ ವಾಸಿ, ಬಂಗಾರದ ಬೆಳೆ ತೆಗೆಯಿರಿ ಎಂದು ಚಾಮರಾಜನಗರ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ ಹೇಳಿದ್ದಾರೆ.
Advertisement
ಪಟ್ಟಣದಿಂದ ಊರು ಸೇರಿದವರ ಸಾವಿರಾರು ಜನರ ಪೈಕಿ ನಂಜನದೇವನಪುರದ ಪ್ರಕಾಶ್ ದಂಪತಿ ಕೂಡ ಒಬ್ಬರು. ಇವರು ಬೆಂಗಳೂರಿನ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್‍ಡೌನ್ ಘೋಷಣೆಯಾಗುತ್ತಿದ್ದಂತ ಗ್ರಾಮಕ್ಕೆ ಹಿಂದಿರುಗಿದ್ದರು. ಮತ್ತೆ ಹೋಗಲು ಸಾಧ್ಯವಾಗದೆ ಊರಿನಲ್ಲೇ ಉಳಿದರು. ಕೊನೆಗೆ ಜೀವನಕ್ಕಾಗಿ ಈ ದಂಪತಿ ತಮ್ಮ ಪಾಳು ಬಿದ್ದಿದ್ದ ನಾಲ್ಕು ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ, ಉಳುಮೆ ಮಾಡಿ ವ್ಯವಸಾಯ ಆರಂಭಿಸಿದ್ದಾರೆ.
ಟೊಮೆಟೋ, ಬಾಳೆ, ಮಂಗಳೂರು ಸೌತೆ, ಮೆಣಸಿಕಾಯಿ ಹೀಗೆ ನಾನಾ ರೀತಿಯ ಬೆಳೆ ಹಾಕಿದ್ದಾರೆ. ಈಗಾಗಲೇ ಉತ್ತಮವಾಗಿ ಟೊಮಾಟೊ ಹಾಗೂ ಮಂಗಳೂರು ಸೌತೆ ಬೆಳೆ ಕೈ ಸೇರುತ್ತಿದ್ದು, ಈ ದಂಪತಿ ಕೃಷಿಯಲ್ಲಿ ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮತ್ತೊಬ್ಬರ ಕೈ ಕೆಳಗೆ ಕೆಲಸ ಮಾಡುವುದಕ್ಕಿಂತ ನಮ್ಮ ಜಮೀನಿನಲ್ಲಿ ಕೃಷಿ ಮಾಡುವುದೇ ಉತ್ತಮ. ಅದರಲ್ಲೇ ನಮಗೆ ನೆಮ್ಮದಿ ಸಿಗುತ್ತಿದೆ ಎಂದು ದಂಪತಿ ಹೇಳಿದ್ದಾರೆ.
ಇವರಂತೆ ಲಾಕ್‍ಡೌನ್ ಪರಿಣಾಮ ಕೆಲಸ ಕಳೆದುಕೊಂಡು ನಗರ ಪ್ರದೇಶಗಳಿಂದ ತಮ್ಮ ತಮ್ಮ ಊರುಗಳಿಗೆ ವಾಪಸ್ ಬಂದ ನೂರಾರು ಕುಟುಂಬಗಳು ಕೃಷಿಯತ್ತ ಮುಖಮಾಡಿವೆ. ಈ ಮೂಲಕ ಸ್ವಾವಲಂಬಿ ಬದುಕು ಕಂಡುಕೊಳ್ಳಲು ಮುಂದಾಗಿವೆ.