ಬೆಂಗ್ಳೂರಿಂದ ಮೈಸೂರು, ಕುಂದಾನಗರಿಗೆ ಇಂದಿನಿಂದ ಸ್ಪೆಷಲ್ ರೈಲು

Public TV
2 Min Read
TRAIN 6

– ಯಾವಾಗ, ಎಲ್ಲಿಂದ, ಯಾವ ಸಮಯದಲ್ಲಿ ಹೊರಡುತ್ತೆ?

ಬೆಂಗಳೂರು: ಕೊರೊನಾ ಭೀತಿಯಿಂದ ಇಡೀ ರಾಜ್ಯವನ್ನೇ ಲಾಕ್‍ಡೌನ್ ಮಾಡಿರುವ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯದಲ್ಲಿ ರೈಲು ಸಂಚರಿಸಲಿದೆ. ಒಂದಿಷ್ಟು ಬದಲಾವಣೆಗಳೊಂದಿಗೆ ರೈಲು ಸಂಚಾರ ಆರಂಭವಾಗಿದೆ.

ಕೊರೊನಾ ಎಫೆಕ್ಟ್, ಲಾಕ್‍ಡೌನ್‍ನಿಂದಾಗಿ ನಿಂತು ಹೋಗಿದ್ದ ರೈಲು ಸಂಚಾರ ಇಂದಿನಿಂದ ರಾಜ್ಯದಲ್ಲಿ ಶುರುವಾಗಿದೆ. ಒಂದು ರೈಲು ಮೈಸೂರಿನಿಂದ ಬೆಂಗಳೂರಿಗೆ ಸಂಚರಿಸಿದರೆ, ಮತ್ತೊಂದು ರೈಲು ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸಲಿದೆ. ಈಗಾಗಲೇ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದಂತೆ ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ಮಾಡಿದರೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತೆ. ಮೊದಲಿನಂತೆ ರೈಲು ನಿಲ್ದಾಣದಲ್ಲಿ ಜಮಾಯಿಸುವಂತಿಲ್ಲ. ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಿ ಸೀಟು ಲಭ್ಯವಾಗುವುದು ದೃಢಪಟ್ಟ ಬಳಿಕವೇ ನಿಲ್ದಾಣಕ್ಕೆ ಬರಬೇಕು.

train 1 2

ರೈಲು ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶವಿಲ್ಲ. ಅಲ್ಲದೆ ರೈಲು ನಿಲ್ದಾಣಕ್ಕೆ ಒಳ ಬರಲು ಒಂದು ದ್ವಾರ ಮತ್ತು ಹೊರಹೋಗಲು ಒಂದು ದ್ವಾರದ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಬೇರೆ ಯಾವ ದ್ವಾರದಲ್ಲೂ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶವಿಲ್ಲ.

ಬೆಂಗಳೂರಿಂದ ಬೆಳಗಾವಿಗೆ ಕೂಡ ವಿಶೇಷ ರೈಲು ಸಂಚರಿಸಲಿದೆ. ಈ ರೈಲು ಯಶವಂತಪುರ, ತುಮಕೂರು, ಅರಸಿಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಬೆಳಗಾವಿ ತಲುಪಲಿದೆ. ಈ ರೈಲು ಸೋಮವಾರ, ಬುಧವಾರ, ಶುಕ್ರವಾರ ಬೆಂಗಳೂರಿಂದ ಹೊರಡಲಿದ್ದು, ಮಂಗಳವಾರ, ಗುರುವಾರ, ಶನಿವಾರ ಬೆಳಗಾವಿಯಿಂದ ಸಂಚರಿಸಲಿದೆ.

train 2 1

ಎಂದಿನಂತೆ ಈ ವಿಶೇಷ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕೂಡ ಕಡ್ಡಾಯವಾಗಿ ಐಆರ್‌ಸಿಟಿವೆಬ್‍ಸೈಟ್ ಮೂಲಕವೇ ಟಿಕೆಟ್ ಬುಕ್ ಮಾಡಬೇಕು.

ಯಾವ ಸಮಯದಲ್ಲಿ ಹೊರಡುತ್ತೆ?:
ಬೆಂಗಳೂರಿನಿಂದ ಬೆಳಗ್ಗೆ ಸುಮಾರು 9.20ಕ್ಕೆ ಹೊರಡುವ ರೈಲು ಮಧ್ಯಾಹ್ನ 12:45ಕ್ಕೆ ಮೈಸೂರು ತಲುಪಲಿದೆ. ಅದೇ ರೈಲು ಮಧ್ಯಾಹ್ನ 1:45ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ನಿರ್ಗಮಿಸಲಿದೆ. ಬೆಳಗ್ಗೆ 8 ಗಂಟೆಗೆ ಬೆಂಗಳೂರಿಂದ ಬೆಳಗಾವಿಗೆ ತೆರಳಲಿರುವ ವಿಶೇಷ ರೈಲು ಸಂಜೆ 6.30ರ ಸುಮಾರಿಗೆ ಬೆಳಗಾವಿಗೆ ತಲುಪಲಿದೆ. ಬೆಳಗಾವಿಯಿಂದ ಬೆಳಗ್ಗೆ 8 ಗಂಟೆಗೆ ಹೊರಡಲಿರುವ ರೈಲು ಸಂಜೆ 6.30ಕ್ಕೆ ಬೆಂಗಳೂರು ತಲುಪಲಿದೆ.

ಜೂನ್ 1ರಿಂದ 200 ರೈಲುಗಳು ದೇಶಾದ್ಯಂತ ಸಂಚರಿಸಲಿವೆ. ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ಕೌಂಟರ್‌ಗಳ ಮೂಲಕ ಟಿಕೆಟ್ ಬುಕ್ಕಿಂಗ್ ಆರಂಭ ಮಾಡುವುದಾಗಿ ರೈಲ್ವೇ ಸಚಿವಾಲಯ ಹೇಳಿದೆ. ಇನ್ನೂ 200 ರೈಲುಗಳ ಪೈಕಿ ಆರು ರೈಲುಗಳು ರಾಜ್ಯದಲ್ಲಿ ಸಂಚರಿಸಲಿವೆ.

train 3 1

ರಾಜ್ಯಕ್ಕೆ ಯಾವ್ಯಾವ ರೈಲು:
* ಮುಂಬೈ – ಬೆಂಗಳೂರು ಕೆಎಸ್‍ಆರ್- ಉದ್ಯಾನ್ ಎಕ್ಸ್‌ಪ್ರೆಸ್
* ದಾನಾಪುರ – ಬೆಂಗಳೂರು ಕೆಎಸ್‍ಆರ್- ಸಂಘಮಿತ್ರ ಎಕ್ಸ್‌ಪ್ರೆಸ್
* ನವದೆಹಲಿ – ಯಶವಂತಪುರ- ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್
* ಹೌರಾ – ಯಶವಂತಪುರ- ದುರಂತೋ ಎಕ್ಸ್‌ಪ್ರೆಸ್
* ಬೆಂಗಳೂರು – ಹುಬ್ಬಳ್ಳಿ- ಜನಶತಾಬ್ದಿ ಎಕ್ಸ್‌ಪ್ರೆಸ್
* ಯಶವಂತಪುರ – ಶಿವಮೊಗ್ಗ- ಜನಶತಾಬ್ದಿ ಎಕ್ಸ್‌ಪ್ರೆಸ್
* ಎರ್ನಾಕುಲಂ – ನಿಜಾಮುದ್ದೀನ್- ಮಂಗಳ ಎಕ್ಸ್‌ಪ್ರೆಸ್
(ಮಂಗಳೂರು- ಉಡುಪಿ-ಕುಂದಾಪುರ-ಭಟ್ಕಳ-ಕಾರವಾರ ಮೂಲಕ ಹಾದು ಹೋಗಲಿದೆ)

ಲಾಕ್‍ಡೌನ್ ಪರಿಣಾಮ ಪ್ರಯಾಣಿಕರ ರೈಲು ಸಂಚಾರ ರದ್ದುಗೊಂಡ ಬಳಿಕ ಮೊದಲ ಬಾರಿಗೆ ರೈಲು ಸಂಚಾರ ನಡೆಸುತ್ತಿದೆ. ಬೆಂಗಳೂರಿನಿಂದ ಬೆಳಗಾವಿ, ಬೆಂಗಳೂರಿನಿಂದ ಮೈಸೂರಿಗೆ ರೈಲು ಸಂಚರಿಸುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *