– ನಮಗೆ ಓದಿನಲ್ಲಿ ಇಲ್ಲ, ಕ್ರೀಡೆಯಲ್ಲಿ ಆಸಕ್ತಿ ಇದೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಏಳು ಮಕ್ಕಳು ನಾಪತ್ತೆಯಾಗಿರುವ ಪ್ರಕರಣ ಸಂಬಂಧ ಇದೀಗ ಅವರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.
ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ 15 ವರ್ಷದ ಮೂವರು ಮಕ್ಕಳು ಹಾಗೂ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮಕ್ಕಳು ನಾಪತ್ತೆಯಾಗಿದ್ದಾರೆ. ಇದುವರೆಗೂ ನಾಪತ್ತೆಯಾಗಿರೋ ಮಕ್ಕಳ ಬಗ್ಗೆ ಯಾವುದೇ ಕ್ಲೂ ಸಿಕ್ಕಿಲ್ಲ. ಹೀಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಿರೋ ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾ, ರಾತ್ರಿಯಿಡೀ ಏಳು ಮಕ್ಕಳ ಪೋಷಕರ ಬಳಿ ಮಾಹಿತಿ ಪಡೆದಿದ್ದಾರೆ.
ಬಾಗಲಗುಂಟೆಯ ಕಿರಣ್, ಪರಿಕ್ಷೀತ್, ನಂದನ್ ಹಾಗೂ ಸೋಲದೇವನಹಳ್ಳಿಯಲ್ಲಿ ಒಂದೇ ಅಪಾರ್ಟ್ ಮೆಂಟ್ ನ ರಾಯನ್, ಸಿದ್ದಾಂತ್, ಭೂವಿ, ಚಿಂತನ್ ನಾಪತ್ತೆಯಾಗಿರುವ ಮಕ್ಕಳು. ಪೋಷಕರ ಜೊತೆಗೆ ಶಾಲಾ ಆಡಳಿತ ಮಂಡಳಿಯಿಂದಲೂ ಮಾಹಿತಿ ಪಡೆದಿದ್ದಾರೆ. ಆದರೆ ಮಕ್ಕಳ ನಾಪತ್ತೆ ಬಗ್ಗೆ ಇದುವರೆಗೂ ನಿಖರ ಕಾರಣ ತಿಳಿದಿಲ್ಲ. ಯಾವ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾರೆ ಅನ್ನೋದು ನಿಗೂಢವಾಗೇ ಉಳಿದಿದೆ.
ಮನೆಯಲ್ಲಿ ಸಿಕ್ಕ ಲೆಟರ್ ನಿಂದಲೂ ಯಾವುದೇ ಕ್ಲೂ ಸಿಕ್ಕಿಲ್ಲ. ಬಾಗಲಗುಂಟೆಯಿಂದ ನಾಪತ್ತೆಯಾಗಿರೋ ಮೂವರು ಮಕ್ಕಳು ಪತ್ರ ಬರೆದಿದ್ದಾರೆ. ನಮಗೆ ಓದಿನಲ್ಲಿ ಆಸಕ್ತಿ ಇಲ್ಲ, ಕ್ರೀಡೆಯಲ್ಲಿ ಆಸಕ್ತಿ ಇದೆ, ಕ್ರೀಡೆಯಲ್ಲೆ ಸಾಧನೆ ಮಾಡಿ ಹೆಚ್ಚು ಹಣ ಗಳಿಸುತ್ತೇವೆ. ಹಣ ಗಳಿಸಿದ ಬಳಿಕ ವಾಪಸ್ ಬರುವುದಾಗಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಬಾಗಲಗುಂಟೆ ಪೊಲೀಸರಿಂದ ಮೂವರು ಮಕ್ಕಳಿಗಾಗಿ ತೀವ್ರ ಹುಡುಕಾಟ ನಡೆದಿದೆ. ಇದನ್ನೂ ಓದಿ: ವರುಣನ ಆರ್ಭಟಕ್ಕೆ ಬೆಳೆ ಹಾನಿ ಭೀತಿ – ಕೋಲಾರದಲ್ಲಿ ತೋಟದಲ್ಲೇ ಕೊಳೆಯುತ್ತಿವೆ ಟೊಮೆಟೋ
ಸೋಲದೇವನಹಳ್ಳಿಯ ಎಜಿಬಿ ಲೇಔಟ್‍ನ ಕ್ರಿಸ್ಟಲ್ ಆಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ನಾಲ್ವರು ಮಕ್ಕಳು ಸೋಪ್, ಪೇಸ್ಟ್, ಬ್ರಷ್, ವಾಟರ್ ಬಾಟಲ್, ಹಣ ಎಂದು ಬರೆದಿರುವ ಚೀಟಿಗಳು ಪತ್ತೆಯಾಗಿವೆ. ಸದ್ಯ ಎಲ್ಲಾ ಕಡೆಗಳಲ್ಲಿಯೂ ಹುಡುಕಾಟ ಮಾಡ್ತಾ ಇದ್ದೀವಿ ಅಂತಾ ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.