ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸ್ಲಂ ತೆರವು ವೇಳೆ ಗಲಾಟೆ ನಡೆದಿದೆ. ಸ್ಲಂ ತೆರವು ಮಾಡುವುದನ್ನು ಪ್ರತಿಭಟಿಸಿ ಇಬ್ಬರು ವಿಷ ಸೇವನೆ ಮಾಡಿದ್ದಾರೆ. ಈ ಇಬ್ಬರನ್ನು ಪೊಲೀಸರು ಧರಧರನೇ ಎಳೆದೊಯ್ದು ದೌರ್ಜನ್ಯವೆಸಗಿದ್ದಾರೆ.
ಈ ಘಟನೆ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ. ಏಕಾಏಕಿ ಬಂದು ಸ್ಲಂ ಬೋರ್ಡ್ ನಿಂದ ತೆರವು ಕಾರ್ಯಾಚರಣೆ ನಡೆದಿದೆ. ಪೊಲೀಸರ ದಂಡನ್ನೇ ಕರೆತಂದು ತೆರವು ಕಾರ್ಯಾಚರಣೆಗೆ ಯತ್ನಿಸಲಾಗಿದೆ. ಬಟ್ಟೆ, ಬರೆ, ಮಕ್ಕಳನ್ನು ಪೊಲೀಸರು ಮನೆಯಿಂದ ಹೊರಕ್ಕೆ ದಬ್ಬಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಹೀಗೆ ಏಕಾಏಕಿ ಬಂದು ಮನೆ ತೆರವು ಮಾಡಿದರೆ ಈ ಕೊರೊನಾ ಸಮಯದಲ್ಲಿ ಎಲ್ಲಿ ಹೋಗೋಣ ಅಂತ ನಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ ಬಿಜೆಪಿ ಕೌನ್ಸಿಲರ್ ಕಾಂಗ್ರೆಸ್ಸಿನವರು ಅನ್ನೋ ಕಾರಣಕ್ಕೆ 17 ಮನೆಗೆ ನೋಟೀಸ್ ಕೊಟ್ಟು ಎತ್ತಂಗಡಿ ಮಾಡೋಕೆ ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement
Advertisement
ಜನವರಿಗೆ ಸ್ಟೇ ಅವಧಿ ಮುಗಿದಿತ್ತು. ಮೂವತ್ತು ಮನೆಯಲ್ಲಿ ಕೇವಲ ಹದಿನೇಳು ಮನೆಗೆ ನಿನ್ನೆ ನೋಟಿಸ್ ಕೊಟ್ಟಿದ್ದು, ಇಂದು ಏಕಾಏಕಿ ಬಂದು ಮನೆಯ ವಸ್ತುಗಳನ್ನು ಹೊರಹಾಕಿದ್ದಾರೆ. ನಾವು ಮನೆಯಿಂದ ಹೋಗಲ್ಲ ಸಾಯ್ತೀವಿ ಅಂತ ಇಬ್ಬರು ಮಹಿಳೆಯರ ಗಲಾಟೆ ಮಾಡಿದ್ದು, ಇವರ ಮಧ್ಯೆ ಮಗುವೊಂದು ಕಣ್ಣೀರು ಹಾಕುತ್ತಿರುವುದು ಮನಕಲಕುವಂತಿತ್ತು.
ಫೆಬ್ರವರಿಯಲ್ಲಿ ಕೋರ್ಟ್ ಮೊರೆ ಹೋಗಲು ಕುಟುಂಬ ರೆಡಿಯಾಗಿತ್ತು. ಆದರೆ ಈ ಮಧ್ಯೆ ಏಕಾಏಕಿ ಮನೆ ತೆರವು ಮಾಡಲಾಗುತ್ತಿದೆ. ನಾವು ಮನೆಯಿಂದ ಕದಲಲ್ಲ, ಬಿಲ್ಡಿಂಗ್ ಮೇಲಿಂದ ಹಾರ್ತೀವಿ ಅಂತ ನಿವಾಸಿಗಳು ಪೊಲೀಸರಿಗೆ ಗದರಿಸಿರುವ ಪ್ರಸಂಗ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.