ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿ ದಿನ ಮಹಾಮಾರಿ ಕೊರೊನಾಗೆ ಹೆಣ ಬೀಳುತ್ತನೇ ಇದೆ. ಇಲ್ಲಿನ ನರಕ ಬದುಕಿನ ಕರಾಳ ಸತ್ಯವನ್ನು ವೈದ್ಯರೊಬ್ಬರು ಬಿಚ್ಚಿಟ್ಟಿದ್ದಾರೆ.
ಹೌದು. ಐಸಿಯುವಿನಲ್ಲಿ ನಿಂತು ವೈದ್ಯರೊಬ್ಬರು ಕೈಮುಗಿದು ವಿಡಿಯೋ ಮಾಡಿ ಕಣ್ಣೀರು ಹಾಕಿದ್ದಾರೆ. ಐಸಿಯು ಕೇರ್ ನಿಂದ `ವೈದ್ಯ ದೇವರ’ ಮಾತಿನ ಎಕ್ಸ್ ಕ್ಲೂಸಿವ್ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ವಿಡಿಯೋದಲ್ಲೇನಿದೆ..?
ನಾನು ಕೋವಿಡ್ ಆಸ್ಪತ್ರೆಯಾದ ಎಚ್‍ಬಿಎಸ್ ಆಸ್ಪತ್ರೆಯ ಐಸಿಯು ಕೇರ್ ನಿಂದ ಮಾತನಾಡ್ತಿದ್ದೇನೆ. ನಾನು ಬೆಳಗ್ಗೆ 7.30ಕ್ಕೆ ಆಸ್ಪತ್ರೆಗೆ ಬಂದಿದ್ದೇನೆ. ಈಗ ಸಮಯ ಮಧ್ಯರಾತ್ರಿ 12 ಗಂಟೆ. ನಿರಂತರ ಕರೆ ಬರುತ್ತಿದೆ. ನನ್ನ ತಂದೆಗೆ ಉಸಿರಾಟದ ಸಮಸ್ಯೆ ಇದೆ, ನನ್ನ ಮಗಳಿಗೆ ಉಸಿರಾಟದ ಸಮಸ್ಯೆ ಇದೆ. ಅಣ್ಣನಿಗೆ ಉಸಿರಾಟದ ಸಮಸ್ಯೆ ಇದೆ ಎಲ್ಲೂ ಬೆಡ್ ಸಿಗ್ತಿಲ್ಲ. ನೀವು ನೋಡುತ್ತಿದ್ದೀರಾ ಇಲ್ಲಿ ನಾವಿಬ್ಬರೇ ವಾರ್ಡಿನಲ್ಲಿದ್ದೇವೆ ಎಂದು ಕಣ್ಣೀರು ಹಾಕಿದ್ದಾರೆ.
ಈ ಸಮಯದಲ್ಲಿ ಇಲ್ಲಿ ಕೆಲಸ ಮಾಡಲು ಯಾವ ಡಾಕ್ಟರ್ ಕೂಡ ಮುಂದೆ ಬರುತ್ತಿಲ್ಲ. ನಮ್ಮಲ್ಲಿ ಬೆಡ್, ಆಕ್ಸಿಜನ್ ವ್ಯವಸ್ಥೆ, ವೆಂಟಿಲೇಟರ್ ಹೀಗೆ ಎಲ್ಲಾ ವ್ಯವಸ್ಥೆಯೂ ಇದೆ. ಆದರೆ ಕೆಲಸ ಮಾಡಲು ಡಾಕ್ಟರ್‍ಗಳೇ ಬರುತ್ತಿಲ್ಲ. ದಿನದಲ್ಲಿ ನನಗೆ ನಿಮ್ಮ ಕೇವಲ ಆರೇ ಆರು ಗಂಟೆ ಕೊಡಿ. ಪ್ಲೀಸ್.. ಇದು ನನ್ನ ಮನವಿ ಎಂದಿದ್ದಾರೆ.
ಈಗ ನಮ್ಮ ಕಾರ್ಯಕ್ಷಮತೆ, ಕಾಳಜಿ ತೋರಿಸೋ ಸಮಯ. ಸೇನೆಯವರಿಗೆ ತಮ್ಮ ಕಾರ್ಯ ತೋರಿಸೋ ಸಮಯ ಬರುತ್ತೆ. ಪೊಲೀಸ್, ಅಗ್ನಿಶಾಮಕದವರಿಗೂ ತಮ್ಮ ಕಾರ್ಯ ತೋರಿಸೋ ಸಮಯ ಬರುತ್ತೆ. ಇದೀಗ ನಮ್ಮ ಸಮಯ. ಈಗ ಡಾಕ್ಟರ್‍ಗಳ ಸರದಿ ಬಂದಿದೆ. ವೈದ್ಯರುಗಳೇ ಇಂತಹ ಸಂದರ್ಭಗಳಲ್ಲಿ ನಮ್ಮ ಮಾನವೀಯತೆಯಿಂದ ಕಾರ್ಯಕ್ಷಮತೆಯನ್ನು ತೋರಿಸೋಣ. ಇಲ್ಲಿರೋದು ನಮ್ಮ ತಾಯಿ, ಅಣ್ಣ, ತಂದೆ ಅಂತ ಅಂದುಕೊಳ್ಳೋಣ. ನಾವೀಗ ಸಹಾಯ ಮಾಡಬೇಕಿದೆ, ಎದ್ದೇಳೋಣ. ನಮ್ಮ ಅಕ್ಕರೆಯನ್ನು ಜನ್ರಿಗೆ ಕೊಟ್ಟು ಉಳಿಸೋಣ ಎಂದು ವೈದ್ಯ ಕೈ ಮುಗಿದು ಬೇಡಿಕೊಂಡಿದ್ದಾರೆ.