ಬೆಂಗಳೂರು: ಅರಬ್ಬಿಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ವಿವಿಧೆಡೆ ಅಕಾಲಿಕ ಮಳೆ ಮುಂದುವರಿದಿದೆ. ಇಂದು ಬೆಂಗಳೂರು, ಮೈಸೂರು, ಶಿವಮೊಗ್ಗ ಸೇರಿ ಹಲವೆಡೆ ಮಳೆ ಆಗಿದ್ದು, ಕೆಲಕಾಲ ಜನಜೀವನ ಅಸ್ತವ್ಯಸ್ತ ಆಗಿತ್ತು.
ಮುಂದಿನ ಎರಡು ದಿನ ದಕ್ಷಿಣ ಒಳನಾಡಿನಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎರಡು ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದೆ. ಹಿರಿಯೂರು ತಾಲೂಕಿನ ದೇವರಟ್ಟಿಯಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ಅಕಾಲಿಕ ಮಳೆಯಿಂದ ಚಿತ್ರದುರ್ಗದಲ್ಲಿ ಅಂತರ್ಜಲ ಹೆಚ್ಚಾಗಿದೆ.
ಕೋಲಾರದಲ್ಲಿ ಗಾಳಿ ಸಹಿತ ಜೋರು ಮಳೆ ಆಗಿದೆ. ಬೆಳಗ್ಗೆಯಿಂದಲೂ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣ ಮಳೆ ಮುನ್ಸೂಚನೆಯನ್ನು ನೀಡಿತ್ತು. ಮಧ್ಯಾಹ್ನದ ವೇಳೆಗೆ ಸುರಿದ ಮಳೆಗೆ ಸಾರ್ವಜನಿಕರು ಪರದಾಡುವಂತಾಯ್ತು. ಕೋಲಾರ ಜಿಲ್ಲೆಯಲ್ಲಿ ಮುಂದಿನ ಮೂರು ದಿನ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಗಳಿವೆ.