ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಇಂದು ಮಳೆಯಾಗಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ನಾಲ್ಕು ಗಂಟೆಯಿಂದ ಮಳೆಯಾಗಿದೆ. ಬೆಂಗಳೂರಿನ ಹೊರವಲಯ ನೆಲಮಂಗಲದಲ್ಲಿ ಗಾಳಿ ಸಹಿತ ಮಳೆಯಾಗಿದೆ
ಚಿಕ್ಕಮಗಳೂರು: ಮಂಗಳವಾರ ಕೇವಲ 2 ಗಂಟೆಯಲ್ಲಿ ಸುಮಾರು ಏಳು ಇಂಚಿನಷ್ಟು ಮಳೆ ಸುರಿದಿದ್ದ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಇಂದು ಕೂಡ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಮೂಡಿಗೆರೆ, ಎನ್.ಆರ್.ಪುರ, ಬಾಳೆಹೊನ್ನೂರು ಭಾಗದಲ್ಲಿ ಅಲ್ಲಲ್ಲೇ ತುಂತುರು ಮಳೆಯಾಗಿದೆ. ಮಲೆನಾಡಿನ ಘಟ್ಟ ಪ್ರದೇಶಗಳಲ್ಲೂ ಅಲ್ಲಲ್ಲೇ ಮಳೆಯಾಗುತ್ತಿದ್ದು,ನಾಡಿನ ಜೀವನದಿಗಳಾದ ತುಂಗಾ-ಭದ್ರಾ ಹೇಮಾವತಿ ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಕೂಡ ಏರಿಕೆಯಾಗಿದೆ.
ಮಂಗಳವಾರ ಸಂಜೆಯಿಂದ ರಾತ್ರಿವರೆಗೆ ಕೇವಲ ಎರಡು ಗಂಟೆಯಲ್ಲಿ ಮೂಡಿಗೆರೆ ತಾಲೂಕಿನ ಕೆಲ ಭಾಗ ಏಳು ಇಂಚಿನಷ್ಟು ಮಳೆ ಸುರಿದಿದ್ದು ಮಲೆನಾಡಿಗರು ದೈತ್ಯ ಮಳೆ ಕಂಡು ಕಂಗಾಲಾಗಿದ್ದು, ಕಳೆದ ವರ್ಷ ಬಂದ ಪರಿಸ್ಥಿತಿ ಈ ವರ್ಷವೂ ಬರುತ್ತಾ ಎಂದು ಮಲೆನಾಡಿನ ಜನ ಆತಂಕಕ್ಕೀಡಾಗಿದ್ದಾರೆ. ಕಳೆದ ಹದಿನೈದು ದಿನಗಳಿಂದ ಮಲೆನಾಡಿನಲ್ಲಿ ಆಗಾಗ್ಗೆ ಮಳೆ ಸುರಿಯುತ್ತಿತ್ತು. ಆದರೆ ಮಂಗಳವಾರ ಮಳೆ ಎಂದು ಸುರಿದಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಕಳೆದ ವರ್ಷ ಕೂಡ 18 ಗಂಟೆಯಲ್ಲಿ 22 ಇಂಚಿನಷ್ಟು ಮಳೆ ಸುರಿದಿತ್ತು. ಆದ್ರೆ ಈ ವರ್ಷ ಕಳೆದ ರಾತ್ರಿ ಎರಡೇ ಗಂಟೆಯಲ್ಲಿ ಏಳು ಇಂಚು ಮಳೆ ಸುರಿದಿರೋದು ಮಲೆನಾಡಿಗರನ್ನ ಕಂಗಾಲಾಗಿಸಿದೆ. ಮಲೆನಾಡಿಗರು ಮಲೆನಾಡಿನ ಮೇಲೆ ವರುಣದೇವನಿಗಿರೋ ಕೋಪ ತಣ್ಣಗಾದಂತೆ ಕಾಣುತ್ತಿಲ್ಲ ಎಂದು ಭಾವಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ 30 ನಿಮಿಷ ಅಧಿಕ ಕಾಲ ಮಳೆಯಾಗಿದೆ. ಇನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದೆ.