– ನಿಯಮ ಮೀರಿ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ
– ಅಟ್ಟಹಾಸವನ್ನು ಯಾರೂ ಪ್ರಶ್ನಿಸುವಂತಿಲ್ಲ
ಬೆಂಗಳೂರು: “ಏನ್ ಮಾಡ್ಕೋತ್ತಿಯೋ ಮಾಡ್ಕೋ, ನಿನ್ನನ್ನ ಸುಮ್ನೆ ಬಿಡಲ್ಲ” ಇದು ನಿಯಮ ಮೀರಿ ಸ್ಫೋಟಕ ಬಳಸಿ ಗಣಿಗಾರಿಕೆ ಮಾಡುತ್ತಿರುವ ಗ್ಯಾಂಗ್ ಸದಸ್ಯರು ನೆಲಮಂಗಲದ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಹಾಕಿದ ಧಮ್ಕಿಯ ಪರಿ.
ನೆಲಮಂಗಲದ ಕಲ್ಲುನಾಯ್ಕನಪಾಳ್ಯದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ನಿಯಮ ಮೀರಿ ಸ್ಫೋಟಕಗಳ ಬಳಕೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವರದಿಗಾರ ಪ್ರಕಾಶ್ ಅವರು ಗಣಿಗಾರಿಕೆ ನಡೆಯುತ್ತಿರುವ ಜಾಗಕ್ಕೆ ವರದಿಗೆಂದು ತೆರಳಿದ್ದರು. ಈ ವೇಳೆ ಗಣಿಗಾರಿಕೆ ನಡೆಸುತ್ತಿದ್ದ ವ್ಯಕ್ತಿಗಳ ಜೊತೆ ಮಾಹಿತಿಗಾಗು ಪ್ರಶ್ನೆ ಕೇಳಿದ್ದಕ್ಕೆ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ.
ಜನ ಹೇಳಿದ್ದು ಏನು? ಗಣಿಗಾರಿಕೆಯಿಂದ ಮನೆಗಳು ಬಿರುಕು ಬಿಡುತ್ತಿವೆ. ಸ್ಫೋಟಕದ ಅಬ್ಬರಕ್ಕೆ ಮನೆಗಳು ಬೀಳುವ ಸ್ಥಿತಿಯಲ್ಲಿವೆ. ನಿಯಮ ಮೀರಿ ಸ್ಫೋಟಕ ಬಳಕೆ ಮಾಡಲಾಗುತ್ತಿದೆ. ಕಲ್ಲುನಾಯ್ಕನಪಾಳ್ಯದಲ್ಲಿ ಗಣಿಗಾರಿಕೆಯಿಂದಾಗಿ 5 ವರ್ಷದ ಮಗುವಿನ ಜೀವ ಅಪಾಯಕ್ಕೆ ಸಿಲುಕಿಕೊಂಡಿದೆ. ಜಿಲೆಟಿನ್ ಸಿಡಿದ ಅಬ್ಬರಕ್ಕೆ ಬಾಲಕಿಗೆ ಅಂಗವಿಕಲತೆ ಉಂಟಾಗಿದೆ. ಜಿಲೆಟಿನ್ ಸಿಡಿದ ಪರಿಣಾಮ ಮಗು ಸಾವು ಬದುಕಿನ ಹೋರಾಟ ನಡೆಸುತ್ತಿದೆ ಎಂದು ಜನ ಹೇಳಿದ್ದರು.
ಜನರ ಮನವಿಗೆ ಸ್ಪಂದಿಸಿ ಸ್ಫೋಟಕ ಗಣಿಗಾರಿಕೆ ನಡೆಸುತ್ತಿರುವ ಜಾಗಕ್ಕೆ ತೆರಳಿದಾಗ ಪ್ರಭಾವಿ ಕಾಂಗ್ರೆಸ್ ನಾಯಕನ ಆಪ್ತರು ಬೆದರಿಕೆ ಹಾಕಿದ್ದಾರೆ. ಆಪ್ತರಾದ ತಿರುಮಲೇಶ್, ಸೋಮಶೇಖರಯ್ಯ, ರಾಮಕೃಷ್ಣನಿಂದ ಗಣಿ ಗೂಂಡಾಗಿರಿ ಮಾಡಿದ್ದಾರೆ. ಪುಂಡರ ಗುಂಪೊಂದು,”ಏನ್ ಮಾಡ್ಕೋತ್ತಿಯೋ ಮಾಡ್ಕೋ, ನಿನ್ನನ್ನ ಸುಮ್ನೆ ಬಿಡಲ್ಲ” ಎಂದು ಮೊಬೈಲ್ ಕಸಿದುಕೊಂಡಿದ್ದಾರೆ. ಡಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕ್ರಮ ಜರುಗಿಸಲು ಸೂಚನೆ: ಪಬ್ಲಿಕ್ ಟಿವಿ ವರದಿಗಾರನ ಮೇಲೆ ಹಲ್ಲೆ ಕುರಿತಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ನೆಲಮಂಗಲ ವ್ಯಾಪ್ತಿಯಲ್ಲಿ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಹಲ್ಲೆಯನ್ನು ಖಂಡಿಸ್ತೇನೆ. ವರದಿಗಾರನ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ, ಅದು ಅಪರಾಧ ಆಗುತ್ತದೆ. ಪ್ರಕರಣದ ವಸ್ತುಸ್ಥಿತಿ ಏನು ಅಂತ ಸಂಪೂರ್ಣ ವರದಿ ತರಿಸಿಕೊಳ್ಳುತ್ತೇನೆ. ಕೂಡಲೇ ಕ್ರಮ ಜರುಗಿಸಲು ಪೊಲೀಸರಿಗೆ ನಾನು ಸೂಚನೆ ಕೊಡುತ್ತೇನೆ. ಈ ಕುರಿತಾಗಿ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧಿಕಾರಿಗಳಿಂದ ವರದಿ ತರಿಸಿಕೊಳ್ತೇನೆ. ಜಿಲೆಟಿನ್ ಅಕ್ರಮ ಸಂಗ್ರಹದ ಬಗ್ಗೆಯೂ ಮಾಹಿತಿ ತರಿಸಿಕೊಳ್ತೇನೆ. ಕಾನೂನು ಪ್ರಕಾರ ಕ್ರಮಕ್ಕೆ ಸೂಚನೆ ಕೊಡ್ತೇನೆ ಎಂದು ತಿಳಿಸಿದ್ದಾರೆ.