ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ತಡೆಗಾಗಿ ಸಿಎಂ ಯಡಿಯೂರಪ್ಪ ಇಂದು ಸಭೆ ನಡೆಸಿದ್ದು, ಪ್ರಕರಣಗಳ ಹೆಚ್ಚಾಗಿ ಬೆಳಕಿಗೆ ಬರುತ್ತಿರೋ ಬೆಂಗಳೂರು ದಕ್ಷಿಣ ಭಾಗದಲ್ಲಿ ಕಟ್ಟುನಿಟ್ಟಿನ ಸೀಲ್‍ಡೌನ್ ಮಾಡಲು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೊರೊನಾ ನಿಯಂತ್ರಣಕ್ಕಾಗಿ ಸಚಿವರಿಗೆ ಜವಾಬ್ದಾರಿಯನ್ನು ಹಂಚಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಆಗದಂತೆ ನೋಡಿಕೊಳ್ಳಲು ಕಂದಾಯ ಸಚಿವ ಆರ್.ಅಶೋಕ್ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಅವರಿಗೆ ಸೂಚಿಸಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್ ಅವರಿಗೆ ಕೋವಿಡ್ ಕೇರ್ ಸೆಂಟರ್ ಹೆಚ್ಚಿಗೆ ಮಾಡುವ ಜವಬ್ದಾರಿ ನೀಡಿದ್ದಾರೆ. ಇನ್ನು ಸಚಿವ ಡಾ.ಕೆ.ಸುಧಾಕರ್ ಗೆ ಮಾಧ್ಯಮಗಳಿಗೆ ಪ್ರತಿ ದಿನದ ಬೆಳವಣಿಗೆಗಳ ಮಾಹಿತಿ ನೀಡುವ ಜವಾಬ್ದಾರಿಯನ್ನು ನೀಡಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ ಹಣ್ಣು ತರಕಾರಿ ಮಾರಟ ಮಾಡುವವರಿಗೆ, ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುವವರಿಗೆ ಆದ್ಯತೆ ಮೇರೆಗೆ ಕೋವಿಡ್ ಟೆಸ್ಟ್ ಮಾಡಿಸಲು ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಿಎಂ ಸೂಚಿಸಿದ್ದಾರೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಹೆಚ್ಚು ಸೀಲ್‍ಡೌನ್ ಹೆಚ್ಚಿಸಲು ಹೇಳಿದ್ದಾರೆ.