ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಇಡೀ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದ್ದು, ಗಲಭೆಯ ಹಿಂದೆ ಉಗ್ರಗಾಮಿ ಸಂಘಟನೆಯ ಪಾತ್ರವಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರದ ಗಲಭೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಮೀವುದ್ದೀನ್ ಎಂಬಾತನನ್ನು ಭಾನುವಾರ ರಾತ್ರಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಸಮೀವುದ್ದೀನ್‍ಗೆ ಆಲ್ ಹಿಂದ್ ಭಯೋತ್ಪಾದಕ ಸಂಘಟನೆಯ ನಂಟು ಇರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: 4 ತಿಂಗಳ ಅಂತರದಲ್ಲಿ ಎರಡು ಮಕ್ಕಳು ಹೇಗೆ ಸಾಧ್ಯ – ಪ್ರಥಮ್ ವಿರುದ್ಧ ಕೇಸ್ ದಾಖಲು
ಡಿಜೆ ಹಳ್ಳಿ ಗಲಭೆ ವೇಳೆ ಸಮೀವುದ್ದೀನ್ ಸ್ಥಳದಲ್ಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಸಮೀವುದ್ದೀನ್‍ನನ್ನು ಕಸ್ಟಡಿಗೆ ತೆಗೆದುಕೊಂಡಿರುವ ಪೊಲೀಸರು, ಗಲಭೆ ಹಿಂದೆ ಉಗ್ರಗಾಮಿ ಸಂಘಟನೆ ಆಲ್ ಹಿಂದ್ ಪಾತ್ರವಿದೆಯಾ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.
ಶಿವಾಜಿನಗರದಲ್ಲಿ ನಡೆದಿದ್ದ ಬಿಜೆಪಿ ಮುಖಂಡ ರುದ್ರೇಶ್ ಕೊಲೆ ಆರೋಪಿಗಳ ಜೊತೆಗೂ ಸಮೀವುದ್ದೀನ್‍ಗೆ ನಿಕಟ ನಂಟಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಪಿಗಳು ಉಗ್ರ ಸಂಘಟನೆಗಳ ಜೊತೆಗೂ ಲಿಂಕ್ ಇಟ್ಕೊಂಡಿದ್ದಾರಾ ಅಂತ ಪರಿಶೀಲನೆ ನಡೆಸಲಾಗ್ತಿದೆ. ಪ್ರಕರಣ ತನಿಖೆ ಹಂತದಲ್ಲಿರುವ ಕಾರಣ ಈ ಬಗ್ಗೆ ಈಗಲೇ ಏನು ಹೇಳಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಏನಿದು ಅಲ್ ಹಿಂದ್?
ಐಸಿಸ್ ಸಂಘಟನೆಯಿಂದ ಪ್ರೇರಣೆಗೊಂಡು ಸ್ಥಾಪನೆಯಾದ ಸಂಘಟನೆಯೇ ಅಲ್ ಹಿಂದ್. ಉಗ್ರರಾದ ಮೆಹಬೂಬ್ ಪಾಷಾ, ಮೊಯಿದ್ದೀನ್ ಕ್ವಾಜಾ ಈ ಸಂಘಟನೆಯನ್ನು ಸ್ಥಾಪಿಸಿದ್ದು, ದಕ್ಷಿಣ ಭಾರತದಲ್ಲಿ (ಕರ್ನಾಟಕ, ಕೇರಳ) ಸಕ್ರಿಯವಾಗಿದೆ. 200-250 ಉಗ್ರರು ಈ ಸಂಘಟನೆಯಲ್ಲಿ ಇರುವ ಶಂಕೆ ವ್ಯಕ್ತವಾಗಿದ್ದು, ತಿಂಗಳ ಹಿಂದಷ್ಟೇ ಅಲ್ ಹಿಂದ್ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿತ್ತು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಉಗ್ರರು ಹರಡಿರುವ ಶಂಕೆ ವ್ಯಕ್ತವಾಗಿದ್ದು, 2019ರಲ್ಲಿ ಬೆಂಗಳೂರಿನ ಗುರಪ್ಪನ ಪಾಳ್ಯದಲ್ಲಿ ನಡೆದಿದ್ದ ಹಲವು ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡಿನ ಹಿಂದೂ ನಾಯಕರ ಹತ್ಯೆಯಲ್ಲಿ ಅಲ್ ಹಿಂದ್ ಪಾತ್ರವಿದೆ. ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಲ್ ಹಿಂದ್‍ನ ಉಗ್ರ ಶಿವಮೊಗ್ಗದ ಅಬ್ದುಲ್ ಮತೀನ್ ಬಗ್ಗೆ ಮಾಹಿತಿ ನೀಡಿದರೆ 3 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ತೀರ್ಥಹಳ್ಳಿ ಉಗ್ರನ ಪತ್ತೆ ಮಾಡ್ಕೊಟ್ಟರೆ 3 ಲಕ್ಷ ಬಹುಮಾನ- ಎನ್‍ಐಎ ಘೋಷಣೆ