-ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ವಾಜಿದ್ ಪಾಷಾ
ಬೆಂಗಳೂರು: ಕೆ.ಜಿ ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷ ಕೆ.ವಾಜಿದ್ ಪಾಷಾ ಬಂಧನವಾಗಿದೆ. ಬಂಧಿತ ವಾಜಿದ್ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬಂಧಿತ ವಾಜಿದ್ ಕೆಲ ದಿನಗಳ ಹಿಂದೆ ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಣೆಯಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದನು. ಪೋಸ್ಟ್ ಸಂಬಂಧ ಶಾಸಕರ ಬೆಂಬಲಿಗರು ದೂರು ನೀಡಿದ್ದರು. ನಂತರ ಪೊಲೀಸರು ಇಬ್ಬರ ನಡುವೆ ರಾಜಿ ಮಾಡಿಸಿ ಬುದ್ಧಿ ಹೇಳಿ ಕಳುಹಿಸಿದ್ದರು. ಇನ್ನು ಗಲಭೆ ನಡೆದ ದಿನ ನವೀನ್ ವಿರುದ್ಧ ದೂರು ನೀಡಿದ ಗುಂಪಿನಲ್ಲಿಯೂ ವಾಜಿದ್ ಹಾಜರಾಗಿದ್ದನು.
ನವೀನ್ ಅರೆಸ್ಟ್ ಮಾಡಲು ಪೊಲೀಸರು ಎರಡು ಗಂಟೆ ಕಾಲ ಸಮಯ ಕೇಳುತ್ತಿದ್ದಾರೆ. ಅದ್ರೆ ಎರಡು ಗಂಟೆಗಳ ಕಾಲ ಯಾಕೆ ಬೇಕು ಎಂದು ಪೊಲೀಸರ ವಿರುದ್ಧ ವಾಜಿದ್ ಕೂಗಾಡಿದ್ದನು. ಅಸಲಿಗೆ ದೂರು ನೀಡಿದ ನಂತ್ರ ಪರಿಶೀಲನೆ ಮಾಡಿ ಎಫ್‍ಐಆರ್ ದಾಖಲು ಮಾಡಲಿಕ್ಕೆ ಎರಡು ಗಂಟೆಗಳ ಕಾಲ ಬೇಕು. ಎಫ್‍ಐಆರ್ ಇಲ್ಲದೆ ಅರೋಪಿ ಅರೆಸ್ಟ್ ಮಾಡುವುದು ಕಾನೂನು ಬಾಹಿರ. ಈ ಎಲ್ಲಾ ಅಂಶ ಗಮನದಲ್ಲಿಟ್ಟು ಪೊಲೀಸರು ಎರಡು ಗಂಟೆಗಳ ಕಾಲ ಸಮಯ ಕೇಳಿದ್ದರು. ನಮ್ಮನಾಗಿದ್ರೆ ಐದು ಸೆಕೆಂಡ್ ನಲ್ಲಿ ಅರೆಸ್ಟ್ ಮಾಡ್ತಾರೆ ಎಂದು ವಾಜಿದ್ ಕೂಗಾಡಿದ್ದನು.
ವಾಜಿದ್ ಅಣತಿಯಂತೆ ಠಾಣೆಗೆ ಆಗಮಿಸಿದ್ದ ಆತನ ಹಿಂಬಾಲಕರು ಪೊಲೀಸ್ ಸ್ಟೇಶನ್ ಧ್ವಂಸ ಮಾಡಿದ್ದರು ಎಂದು ತಿಳಿದು ಬಂದಿದೆ. ಸದ್ಯ ವಾಜಿದ್ ಬಂಧನದಿಂದ ಆತನ ಹಿಂಬಾಲಕರಲ್ಲಿಯೂ ನಡುಕ ಶುರುವಾಗಿದೆ.