ಬೆಂಗಳೂರು: ದೇವರಜೀವನಹಳ್ಳಿ(ಡಿಜೆಹಳ್ಳಿ) ಮತ್ತು ಕಾಡುಗೊಂಡನ ಹಳ್ಳಿ(ಕೆಜೆಹಳ್ಳಿ) ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿದೆ.
ಎಸ್‌ಡಿಪಿಐ ನಾಯಕರಾದ ಕೆಜೆ ಹಳ್ಳಿ ವಾರ್ಡ್‌ನ ಅಧ್ಯಕ್ಷ ಇಮ್ರಾನ್ ಅಹ್ಮದ್, ಇತರ ಹಿರಿಯ ನಾಯಕ ರುಬಾ ವಕಾಸ್, ನಾಗವಾರ ವಾರ್ಡ್‌ನ ಎಸ್‌ಡಿಪಿಐ ಅಧ್ಯಕ್ಷ ಅಬ್ಬಾಸ್ ಆತನ ಸಹಚರರಾದ ಅಜಿಲ್ ಪಾಷಾ, ಇರ್ಫಾನ್ ಖಾನ್ ಮತ್ತು ಅಕ್ಬರ್ ಖಾನ್ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿದೆ.
ಕೃತ್ಯಕ್ಕೂ ಮುನ್ನ ಆಗಸ್ಟ್ 11ರ ಸಂಜೆ ಸಭೆ ನಡೆಸಿದ್ದಾರೆ. ಬೆಂಗಳೂರಿನ ಥಣಿಸಂದ್ರದ ಮತ್ತು ಕೆ.ಜಿ ಹಳ್ಳಿ ವಾರ್ಡ್‌ಗಳಲ್ಲಿ ನಡೆದ ಸಭೆಗಳಲ್ಲಿ ಪಿತೂರಿ ನಡೆಸಿ, ಗಲಭೆಗೆ ಜನರನ್ನು ಸಜ್ಜುಗೊಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಜನಸಮೂಹ ಜಮಾವಣೆಗೆ ಕುಮ್ಮಕ್ಕು ನೀಡಿದ ಆರೋಪ ಇವರ ಮೇಲಿದೆ.
ಆರೋಪಿಗಳಾದ ಸದ್ದಾಂ, ಸಯೀದ್ ಸೊಹೆಲ್, ಕಲೀಮುಲ್ಲಾ ಅಲಿಯಾಸ್ ಶಾರುಖ್ ಖಾನ್ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಪ್ ಮೂಲಕ ಕೃತ್ಯಕ್ಕೆ ಪ್ರಚೋದನೆ ನೀಡಿ ಜನರು ಸೇರುವಂತೆ ಮಾಡಿದ್ದರು ಎಂದು ಎನ್‌ಐಎ ಹೇಳಿದೆ.
17 ಮಂದಿ ಸೇರಿದಂತೆ ಒಟ್ಟು ಈ ಪ್ರಕರಣಕ್ಕೆ ಸಂಬಂಧಿಸಿಂತೆ 187 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎನ್‌ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.