– ಪಂಚಗಂಗಾ ಎಕ್ಸ್ ಪ್ರೆಸ್ ನಾಮಕರಣಕ್ಕೆ ಮನವಿ ಮಾಡಿದ್ದ ಶೋಭಾ
ಉಡುಪಿ: ಕರಾವಳಿ ಮತ್ತು ರಾಜ್ಯ ರಾಜಧಾನಿಯ ಸಂಪರ್ಕ ಸೇತು ಕಾರವಾರ-ಬೆಂಗಳೂರು ವಯಾ ಪಡೀಲ್ ಬೈಪಾಸ್ ಸೂಪರ್ ಪಾಸ್ಟ್ ರೈಲಿಗೆ ಉಡುಪಿ ಜಿಲ್ಲೆಯ ಐದು ಪ್ರಮುಖ ಪುಣ್ಯ ನದಿಗಳು ಸಂಗಮಿಸಿ ಸೃಷ್ಟಿಯಾಗುವ ಪ್ರಾಕೃತಿಕ ಅಚ್ಚರಿ ಪಂಚಗಂಗಾವಳಿ ನದಿಯ ಹೆಸರನ್ನು ನಾಮಕರಣ ಮಾಡಲಾಗಿದೆ.
ಪ್ರತಿದಿನ ಓಡಾಡುವ ರೈಲನ್ನು ಇನ್ನು ಮುಂದೆ ಪಂಚಗಂಗಾ ಎಕ್ಸ್ ಪ್ರೆಸ್ ಎಂದು ಕರೆಯಲಾಗುತ್ತದೆ. ಕೆಂದ್ರ ರೈಲ್ವೆ ಸಚಿವಾಲಯ ನಾಮಕರಣ ಮಾಡಿ ಆದೇಶ ಹೊರಡಿಸಿದೆ. ಕ್ಷೇತ್ರದ ಜನರ ಅಪೇಕ್ಷೆಯಂತೆ ಸಂಸದೆ ಶೋಭಾ ಕರಂದ್ಲಾಜೆ ಅವರು ರೈಲ್ವೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ್ ಅಂಗಡಿಯವರನ್ನು ಭೇಟಿಯಾಗಿ ಕರಾವಳಿಯ ಬಹುಮುಖ್ಯ ಪುಣ್ಯ ಕ್ಷೇತ್ರಗಳ ಮೂಲಕ ಹರಿಯುವ ಪಂಚಗಂಗಾ, ಜಿಲ್ಲೆಯ ತೀರ್ಥ ಕ್ಷೇತ್ರ, ಪ್ರವಾಸೊದ್ಯಮ, ಮೀನುಗಾರಿಕೆ, ಕೃಷಿ ಹಾಗೂ ಜನಜೀವನಕ್ಕೆ ಅಧಾರವಾಗಿದೆ. ಹೀಗಾಗಿ ನೂತನ ಬೆಂಗಳೂರು-ಕಾರವಾರ ರೈಲಿಗೆ ‘ಪಂಚಗಂಗಾ’ ಹೆಸರಿಡಬೇಕು ಎಂದು ಮನವಿ ಮಾಡಿದ್ದರು.
ಜನರ ಅಪೇಕ್ಷೆಯನ್ನು ಗೌರವಿಸಿ, ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ಪಂಚಗಂಗಾ ಎಕ್ಸ್‍ಪ್ರೆಸ್ ಎಂಬ ಹೆಸರನ್ನು ಕರಾವಳಿಯ ಜೀವನಾಡಿಯಾದ ಬೆಂಗಳೂರು-ಕಾರವಾರ ರೈಲಿಗೆ ನಾಮಕರಣ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಹಾಗೂ ರೈಲ್ವೆ ಸಚಿವಾಲಯಕ್ಕೆ ಸಂಸದೆ ಶೋಭಾ ಕರಂದ್ಲಾಜೆಯವರು ಧನ್ಯವಾದ ಅರ್ಪಿಸಿದ್ದಾರೆ.
ಕಾರವಾರ, ಉಡುಪಿ, ದ.ಕ ಜಿಲ್ಲೆಯ ಜನ ರೈಲನ್ನು ಹೆಚ್ಚಾಗಿ ನೆಚ್ಚಿಕೊಳ್ಳಬೇಕು. ಕಡಿಮೆ ಪ್ರಯಾಣ ದರ, ಸುಲಭ ಸಂಚಾರದ ಜೊತೆ ಮೂಲಭೂತ ಸೌಕರ್ಯಗಳು ರೈಲಿನಲ್ಲಿ ಇರುವ ಕಾರಣ ರಾಜಧಾನಿಗೆ ಓಡಾಡುವ ಎಲ್ಲರೂ ಬಳಸಿ ಎಂದು ಶೋಭಾ ಕರಂದ್ಲಾಜೆ ಕರೆ ನೀಡಿದ್ದಾರೆ.