ಚಿಕ್ಕಬಳ್ಳಾಪುರ: ಬೆಂಗಳೂರಿನ ಕುಖ್ಯಾತ ರೌಡಿ ಬಾಂಬೆ ಸಲೀಂ ಪತ್ನಿ ಜೊತೆ ಯುವಕನೊರ್ವ ಚಾಟಿಂಗ್ ಮಾಡಿದ್ದು, ಪತ್ನಿ ಜೊತೆ ಸಂಪರ್ಕ ಹೊಂದಿದ್ದ ಎಂದು ಯುವಕನನ್ನು ಕೊಲೆ ಮಾಡಲಾಗಿದೆ ಎಂಬ ಸತ್ಯ ಆರು ತಿಂಗಳ ನಂತರ ಬಯಲಾಗಿದೆ.
ಮಾರ್ಚ್ 15ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಆರೋಪಿ ಪತ್ತೆಯಾಗಿದ್ದು, ಆರೋಪಿ ಬಾಂಬೆ ಸಲೀಂ ಉತ್ತರ ಪ್ರದೇಶದ ಮೂಲದ ಯುವಕ ಪೃಥ್ವಿರಾಜ್‍ನನ್ನು ಕೊಲೆ ಮಾಡಿರುವುದಾಗಿ ಖಚಿತವಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಂಬೆ ಸಲೀಂ ಈಗಾಗಲೇ ತಲಘಟ್ಟಪುರ ಪೊಲೀಸ್ ಠಾಣಾ ವ್ತಾಪ್ತಿಯ ಬಾಬು ಕೊಲೆ ಪ್ರಕರಣದಲ್ಲಿ ಪರಪ್ಪನ ಆಗ್ರಹಾರ ಜೈಲು ಸೇರಿದ್ದಾನೆ. ಕೃತ್ಯದಲ್ಲಿ ಭಾಗಿಯಾದ ಬಾಗೇಪಲ್ಲಿಯ ನಾರಾಯಣಸ್ವಾಮಿ, ಚೇತನ್ ಕುಮಾರ್, ವಿನೋದ್, ಬಾಲಚಂದ್ರ ರನ್ನ ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಕೊಲೆ ಹೇಗಾಯಿತು?
ಉತ್ತರ ಪ್ರದೇಶ ಮೂಲದ ಯುವಕ ಪೃಥ್ವಿರಾಜ್, ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಬಾಂಬೆ ಸಲೀಂ ಜೈಲಿನಲ್ಲಿದ್ದ. ಇತ್ತ ಪತ್ನಿ ಸಖೀನಾ ಪೃಥ್ವಿರಾಜ್ ಜೊತೆ ಚಾಟಿಂಗ್ ಮಾಡುತ್ತಿದ್ದಳು. ಜೈಲಿನಿಂದ ಹೊರಬಂದ ಸಲೀಂ ಇದನ್ನು ಗಮನಿಸಿ ಪತ್ನಿ ಬಳಿ ವಿಚಾರಿಸಿದ್ದಾನೆ. ಆಗ ಪ್ಲಾನ್ ಮಾಡಿ ಮಾರ್ಚ್ 15 ರಂದು ಪತ್ನಿ ಸಖೀನಾ ಮೂಲಕವೇ ಪ್ರಥ್ವಿರಾಜ್‍ಗೆ ಕರೆ ಮಾಡಿಸಿ, ತಾನು ಕಾರಿನಲ್ಲಿ ಡ್ರೈವರ್ ಜೊತೆ ಚಿಕ್ಕಬಳ್ಳಾಪುರಕ್ಕೆ ಬರ್ತಿದ್ದು, ನೀನು ಬಾ ಎಂದು ಪೃಥ್ವಿರಾಜ್‍ಗೆ ಹೇಳಿಸಿದ್ದರು.
Advertisement
Advertisement
ಸಖೀನಾ ಮಾತು ಕೇಳಿ ಬಂದ ಪೃಥ್ವಿರಾಜ್, ಚಿಕ್ಕಬಳ್ಳಾಪುರದ ಹೈವೈಯಲ್ಲಿ ಕಾರು ಹತ್ತಿ ಸಖೀನಾ ಮೇಲೆ ಕೈ ಹಾಕಿ ಕೂತಿದ್ದ. ಆದರೆ ಅದೇ ಕಾರಿನಲ್ಲಿ ಚಾಲಕನಾಗಿ ಸಖೀನಾ ಪತಿ ಬಾಂಬೆ ಸಲೀಂ ಬಂದಿದ್ದ. ಇದು ಪ್ರಥ್ವಿರಾಜ್‍ಗೆ ತಿಳಿದಿರಲಿಲ್ಲ. ಮೊದಲೇ ಪ್ಲಾನ್ ಮಾಡಿದಂತೆ ಬಾಂಬೆ ಸಲೀಂ ತನ್ನ ಪತ್ನಿಯನ್ನು ಮರಳಿ ಕಳುಹಿಸಿ, ಬಾಗೇಪಲ್ಲಿಯ ತನ್ನ ನಾಲ್ವರು ಸಹಚರರ ಜೊತೆ ಪೃಥ್ವಿರಾಜ್ ನನ್ನ ಕರೆದುಕೊಂಡು ಹೋಗಿದ್ದರು. ಚಿತ್ರಾವತಿ ಡ್ಯಾಂ ಬಳಿಯ ನಿರ್ಜನ ಪ್ರದೇಶದಲ್ಲಿ ಮಾರ್ಚ್ 15ರ ರಾತ್ರಿ ಡ್ರ್ಯಾಗರ್ ಹಾಗೂ ಮಾರಕಾಸ್ತ್ರ ಗಳಿಂದ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಮಾರ್ಚ್ 16ರ ಬೆಳಗ್ಗೆ ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಾಗೇಪಲ್ಲಿ ಸಿಪಿಐ ಅಂದಿನ ಪ್ರಭಾರ ಎಸ್‍ಪಿ ಜಾಹ್ನವಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ಮೃತ ಯುವಕನ ಕೈ ಮೇಲೆ ಇದ್ದ ಟ್ಯಾಟೂ ಗುರು ಪ್ರೀತ್ ಅನ್ನುವ ಗುರುತುಗಳು ಬಿಟ್ಟರೆ ಮೃತನ ಹೆಸರು, ವಿಳಾಸ ಯಾವುದು ತಿಳಿದುಬಂದಿರಲಿಲ್ಲ. ಹೀಗಾಗಿ ಕಳೆದ 06 ತಿಂಗಳಿಂದ ಪ್ರಕರಣ ಬೇಧಿಸಲಾಗಿರಲಿಲ್ಲ. ಪೊಲೀಸರಿಗೂ ಇದು ಸವಾಲಾಗಿತ್ತು.
ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?
ಕೊಲೆ ಮಾಡಿದ್ದ ಆರೋಪಿಗಳಲ್ಲಿ ಇಬ್ಬರು ಬಾಗೇಪಲ್ಲಿಯ ಡಾಬಾ ಬಳಿ ಊಟ ಮಾಡುತ್ತ ಬಾಂಬೆ ಸಲೀಂ ಅಣ್ಣ ಎಲ್ಲಿ ಅಣ್ಣ ಬೇಲ್ ಸಿಗುತ್ತಾ, ಇಲ್ವಾ? ಏನು ಎಂದು ಬಾಂಬೆ ಸಲೀಂ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ನಾವು ಬಚಾವ್ ಆದೆವು, ಕೊಲೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿಲ್ಲ ಎಂದು ಮಾತನಾಡುತ್ತಿದ್ದರು. ಇದನ್ನು ಕೇಳಿಸಿಕೊಂಡ ಪೊಲೀಸರು ವಿಷಯ ತಿಳಿದು ಸಿಪಿಐ ಗಮನಕ್ಕೆ ತಂದು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಸದ್ಯ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಂಬೆ ಸಲೀಂ ಈಗಾಗಲೇ ತಲಘಟ್ಟಪುರ ಪೊಲೀಸ್ ಠಾಣಾ ವ್ತಾಪ್ತಿಯ ಬಾಬು ಕೊಲೆ ಪ್ರಕರಣದಲ್ಲಿ ಪರಪ್ಪನ ಆಗ್ರಹಾರ ಜೈಲು ಸೇರಿದ್ದಾನೆ. ಕೃತ್ಯದಲ್ಲಿ ಭಾಗಿಯಾದ ಬಾಗೇಪಲ್ಲಿಯ ನಾರಾಯಣಸ್ವಾಮಿ, ಚೇತನ್ ಕುಮಾರ್, ವಿನೋದ್, ಬಾಲಚಂದ್ರ ರನ್ನ ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ ಕೊಲೆ ಪ್ರಕರಣದಲ್ಲಿ ಬಾಂಬೆ ಸಲೀಂ ಪತ್ನಿ ಸಖೀನಾ ಪಾತ್ರದ ಬಗ್ಗೆ ಕರೆಸಿ ಹೆಚ್ಚಿನ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಇತ್ತ ಯುವಕ ಸತ್ತು ಆರು ತಿಂಗಳು ಕಳೆದರೂ ಕುಟುಂಬಸ್ಥರಿಗೆ ಮಾಹಿತಿಯೇ ಇರಲಿಲ್ಲ. ಕಾಣೆಯಾಗಿರುವ ಕುರಿತು ದೂರು ನೀಡಿ ಸುಮ್ಮನಾಗಿದ್ದರು.