– ದಕ್ಷಿಣ ಭಾರತದ ರಾಜ್ಯಗಳ ವ್ಯಕ್ತಿಗಳಲ್ಲಿ ಕೊರೊನಾ
– ಕೋವಿಡ್ ಕೇರ್ ಕೇಂದ್ರಗಳಲ್ಲಿ ಐಸೋಲೇಟ್
– ಮೃತರ ಪೈಕಿ ಶೇ.70ರಷ್ಟು ಪುರುಷ ಸೋಂಕಿತರು ಬಲಿ
ನವದೆಹಲಿ: ಹೊಸ ವರ್ಷದ ಕೊನೆಯಲ್ಲಿ ಮತ್ತೊಂದು ಕಹಿಸುದ್ದಿ. ಬ್ರಿಟನ್‍ನಲ್ಲಿ ಉದ್ಭವಿಸಿ ಇಡೀ ಜಗತ್ತನ್ನು ಕಂಗೆಡಿಸಿರುವ ಹೊಸ ಬಗೆಯ ಕೊರೊನಾ ಇದೀಗ ಭಾರತಕ್ಕೂ ಅಧಿಕೃತವಾಗಿ ಎಂಟ್ರಿ ಕೊಟ್ಟಿದೆ.
ಇತ್ತೀಚಿಗೆ ಬ್ರಿಟನ್‍ನಿಂದ ಭಾರತಕ್ಕೆ ವಾಪಸ್ಸಾದ 7 ಮಂದಿಯಲ್ಲಿ ಹೊಸ ವೈರಸ್ ಕಾಣಿಸಿಕೊಂಡಿದೆ. ಇದರಲ್ಲಿ ಬೆಂಗಳೂರಿನ ಮೂವರು, ಹೈದರಾಬಾದಿನ ಇಬ್ಬರು, ಆಂಧ್ರಪ್ರದೇಶದ ರಾಜಮಹೇಂದ್ರವರಂನ ಒಬ್ಬರು, ಹಾಗೂ ಚೆನ್ನೈನ ಒಬ್ಬರಲ್ಲಿ ಹೊಸ ವೈರಸ್ ಪತ್ತೆಯಾಗಿದೆ.
ಎಲ್ಲಾ ಪ್ರಕರಣಗಳು ವರದಿ ಆಗಿರುವುದು ದಕ್ಷಿಣ ಭಾರತದಲ್ಲಿಯೇ ಎನ್ನುವುದು ಗಮನಿಸಬೇಕಾದ ವಿಚಾರ. ಅದರಲ್ಲೂ ಕರ್ನಾಟಕದ್ದೇ ಸಿಂಹಪಾಲು. ಎಲ್ಲರನ್ನು ಆಯಾಯಾ ರಾಜ್ಯಗಳ ಕೊರೊನಾ ಕೇರ್ ಸೆಂಟರ್‌ಗಳಲ್ಲಿ ಐಸೊಲೇಟ್ ಮಾಡಲಾಗಿದೆ. ಅವರ ಸಂಪರ್ಕದಲ್ಲಿದ್ದ ಕುಟುಂಬಸ್ಥರು, ಆಪ್ತರು, ಅಕ್ಕಪಕ್ಕದ ಮನೆಯವರನ್ನು ಟ್ರೇಸ್ ಮಾಡಿ ಪರೀಕ್ಷೆ ನಡೆಸಲಾಗುತ್ತಿದ್ದು ಕ್ವಾರಂಟೈನ್ ಮಾಡಲಾಗಿದೆ.
ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಎಚ್ಚರಿಕೆ ನೀಡಿದೆ. ಹೊಸ ತಳಿಯ ಸೋಂಕು ಶರವೇಗದಲ್ಲಿ ಹರಡುತ್ತಿದ್ದು, ಗುಣಮಟ್ಟದ ಚಿಕಿತ್ಸೆ ಪಡೆದಲ್ಲಿ ಮಾತ್ರ ಅಪಾಯದಿಂದ ಪಾರಾಗಲು ಸಾಧ್ಯ ಎಂದು ತಿಳಿಸಿದೆ.
ಹೊಸ ತಳಿಯನ್ನು ಈಗಿನ ಲಸಿಕೆಯಿಂದ ನಿಯಂತ್ರಿಸಬಹುದು. ಆದರೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರಷ್ಟೇ ನಿಯಂತ್ರಣ ಸಾಧ್ಯ ಅಂತ ಎಚ್ಚರಿಕೆ ಕೊಟ್ಟಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಿದರೆ ಸೋಂಕು ಮತ್ತಷ್ಟು ಹೆಚ್ಚಬಹುದು. ಹೀಗಾಗಿ ರಾಜ್ಯ ಸರ್ಕಾರಗಳು ರಾತ್ರಿ ಕರ್ಫ್ಯೂ ಹಾಕಿಕೊಳ್ಳಬಹುದು ಎಂದು ಕೇಂದ್ರ ಕೋವಿಡ್ ಟಾಸ್ಕ್ ಫೋರ್ಸ್ ಸೂಚನೆ ನೀಡಿದೆ.
ನೂತನ ತಳಿಯ ವೈರಸ್ ಮೇಲೆ ಹೆಚ್ಚು ಪ್ರತಿರೋಧಕ ಶಕ್ತಿ ಹಾಕಬಾರದು. ಹೆಚ್ಚು ಒತ್ತಡ ಹಾಕಿದಂತೆಲ್ಲಾ ವೈರಸ್ ಇನ್ನಷ್ಟು ರೂಪಾಂತರ ಹೊಂದುವ ಸಾಧ್ಯತೆ ಇದೆ ಎಂದು ಐಸಿಎಂಆರ್ ತಿಳಿಸಿದೆ.
ಡಿಸೆಂಬರ್ 9 ರಿಂದ 22 ವರೆಗೂ ವಾಪಸ್ ಆದ ಪ್ರಯಾಣಿಕರಿಗೆ ಕೊರೊನಾ ರೋಗದ ಗುಣಲಕ್ಷಣಗಳು ಕಂಡು ಬಂದಿದ್ದು, ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ಕೇಂದ್ರ ಆರೋಗ್ಯ ಇಲಾಖೆಯು ಎಲ್ಲ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ವೈರಸ್ ವಂಶವಾಹಿ ರಚನೆ( ಜಿನೋಮ್)ಯ ಪರೀಕ್ಷೆ ಮಾಡಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
ದೇಶಾದ್ಯಂತ ಹತ್ತು ಲ್ಯಾಬ್‍ಗಳನ್ನು ಜೀನೋಮ್ ಪರೀಕ್ಷೆಗೆಂದು ನಿಯೋಜನೆ ಮಾಡಲಾಗಿದ್ದು, ಈವರೆಗೂ 5 ಸಾವಿರ ಜನರಿಗೆ ಜೀನೋಮ್ ಪರೀಕ್ಷೆ ಮಾಡಲಾಗಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳು 2.7 ಲಕ್ಷಗಳಿಗಿಂತ ಕಡಿಮೆ ಇದೆ. ಕಳೆದ ವಾರ ದೇಶದಲ್ಲಿ ಧನಾತ್ಮಕ ಪ್ರಮಾಣವು ಕೇವಲ 2.25% ಇತ್ತು. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ 55% ರಷ್ಟು ಜನ ಮರಣ ಹೊಂದಿದ್ದು, 45 ರಿಂದ 60 ವಯಸ್ಸಿನವರಲ್ಲಿ 33% ಮರಣ ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ ಈವರೆಗೂ 70% ಪುರುಷರು ಮತ್ತು 30% ಮಹಿಳೆಯರು ಕೊರೊನಾದಿಂದ ಮರಣ ಹೊಂದಿದ್ದಾರೆ. ಮೊದಲಿಗೆ ಹೋಲಿಸಿದರೆ ಈಗ ಮರಣ ಹೊಂದುತ್ತಿರುವ ಸಂಖ್ಯೆ ಕಡಿಮೆಯಾಗಿದೆ.
ರೂಪಾಂತರಿ ಕೊರೊನಾ ವೈರಸ್ ಬಗ್ಗೆ ಆರಂಭದಲ್ಲಿಯೇ ಎಚ್ಚೆತ್ತುಕೊಂಡರೆ ಮಾತ್ರ ಅಪಾಯದಿಂದ ಪಾರಾಗಬಹುದು. ಇಲ್ಲದಿದ್ದರೆ ರೂಪಾಂತರಿ ವೈರಸ್ ದೇಶಕ್ಕೆ ಮತ್ತೆ ಹೆಚ್ಚು ಹಾನಿ ಮಾಡಲಿದೆ. ರೂಪಾಂತರಿ ವೈರಸ್ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ತಜ್ಞರಿಂದ ಚಿಕಿತ್ಸೆ ಪಡೆಯಿರಿ. ಇಲ್ಲದಿದ್ದರೆ ಬ್ರಿಟನ್ ಗತಿ ಭಾರತಕ್ಕೂ ಬರಬಹುದು. ಈಗಾಗಲೇ ಬ್ರಿಟನ್ ನಲ್ಲಿ ಪ್ರತಿನಿತ್ಯ 40 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದೆ. ಬ್ರಿಟನ್ ಜನ ಸಂಖ್ಯೆ ಹೋಲಿಸಿದ್ರೆ 40 ಸಾವಿರ ಪ್ರಕರಣಗಳು ಅಧಿಕವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಜುಲೈ – ಆಗಸ್ಟ್ ವೇಳೆಗೆ ಭಾರತದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುವ ಸುಳಿವು ಸಿಕ್ಕಿದ್ದು, ವ್ಯಾಕ್ಸಿನ್ ಬರುವರೆಗೂ ಎಲ್ಲರೂ ಎಚ್ಚರಿಕೆಯಿಂದ ಇರಲೇಬೇಕು. ವೈರಸ್‍ನಿಂದ ಪಾರಾಗಲು ಮಾಸ್ಕ್ ಕಡ್ಡಾಯವಾಗಿ ಬಳಸಬೇಕು ಮತ್ತು ದೈಹಿಕ ಅಂತರ ಕಾಯ್ದುಕೊಳ್ಳಬೇಕು ಅಲ್ಲದೇ ನಿರಂತರವಾಗಿ ಆಗಾಗ ಕೈ ತೊಳೆದುಕೊಳ್ಳಬೇಕು. ಇದರ ಜೊತೆಯಲ್ಲಿ ಕೊರೊನಾ ಹಳೆಯ ನಿಯಮಗಳನ್ನು ಪಾಲಿಸಿ ಎಂದು ಸೂಚಿಸಿದೆ.
ಈಗಾಗಲೇ ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸೋಂಕು ವಿಜೃಂಭಿಸಿದ್ದು, ಲಂಡನ್ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ದಕ್ಷಿಣ ಆಫ್ರಿಕಾದಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಆಮ್ಲಜನಕ ಕೊರತೆ ಎದುರಾಗಿದೆ. ಇದುವರೆಗೂ ಬ್ರಿಟನ್‍ನಿಂದ ಭಾರತಕ್ಕೆ 33 ಸಾವಿರ ಮಂದಿ ಬಂದಿದ್ದಾರೆ. ಈ ಪೈಕಿ 5 ಸಾವಿರ ಮಂದಿಗೆ ಜಿನೋಮ್ ಪರೀಕ್ಷೆ ನಡೆಸಲಾಗಿದೆ.