ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಬಗ್ಗೆ ಇನ್ನೂ ಪೊಲೀಸ್ ತನಿಖೆ ನಡೆಯುತ್ತಿದೆ. ಪಾಲಿಕೆ ಸದಸ್ಯರ ಪಾತ್ರದ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಷ್ಟರಲ್ಲೇ ಕೆಲ ಕಾಂಗ್ರೆಸ್ ನಾಯಕರು ಪುಂಡರಿಗೆ ಕ್ಲೀನ್‍ಚಿಟ್ ನೀಡಲು ಹೊರಟಂತೆ ಇದೆ.
ಮೊನ್ನೆ ಮೊನ್ನೆಯಷ್ಟೇ ಡಿ.ಜೆ. ಹಳ್ಳಿ ಗಲಭೆಕೋರರಲ್ಲಿ ಕೆಲವರು ಅಮಾಯಕರು ಅಂತ ಶಾಸಕ ಜಮೀರ್ ಹೇಳಿಕೆ ಕೊಟ್ಟ ಬೆನ್ನಲ್ಲೇ ಇವತ್ತು ಕೂಡ, ಮೇಲ್ಮನೆ ಸದಸ್ಯ ಸಿ.ಎಂ. ಇಬ್ರಾಹಿಂ ಹಾಗೂ ಶಾಂತಿ ನಗರದ ಶಾಸಕ ಹ್ಯಾರೀಸ್ ಇದೇ ಜಪ ಮಾಡಿದ್ದಾರೆ.
ಗಲಭೆ ಸಂಬಂಧ ಇವತ್ತು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್‍ಪಂತ್ ಅವರನ್ನು ಭೇಟಿಯಾದ ಕೈ ನಾಯಕರು ಹಾಗೂ ಮೌಲ್ವಿಗಳು, ಅಮಾಯಕರಿದ್ದರೆ ಬಿಟ್ಟು ಬಿಡಿ ಅಂತ ಒತ್ತಡ ಹೇರಿದ್ದಾರೆ. ಬಂಧಿತರಲ್ಲಿ ಕೆಲವರು ನಿರಾಪರಾಧಿಗಳಿದ್ದಾರೆ. ಅವರನ್ನು ಬಿಟ್ಟು ಕಳುಹಿಸಿ. ಆರೋಪಿಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.
ಪೋಸ್ಟ್ ಹಾಕಿದಾಕ್ಷಣ ಪೊಲೀಸರು ಕ್ರಮ ಕೈಗೊಂಡಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಹೇಳಿ ಗೂಬೆ ಕೂರಿಸಿದ್ದಾರೆ. ಇನ್ನೊಂದೆಡೆ, ಕೆಲವು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತಕ್ಷಣವೇ ಬಿಡುಗಡೆ ಮಾಡಬೇಕೆಂದು ಶಾಸಕ ಹ್ಯಾರೀಸ್ ಹೇಳಿದ್ದಾರೆ.
ಅಮಾಯಕರನ್ನು ಬಂಧಿಸಿದ್ರೆ ಬಿಟ್ಟು ಕಳುಹಿಸಿ ಅಂತ ಹೇಳಿದರೆ ಒತ್ತಡ ಆಗುವುದಿಲ್ಲವೇ ಎಂದು ಶಾಸಕ ಹ್ಯಾರೀಸ್‍ರನ್ನು ಪ್ರಶ್ನಿಸುತ್ತಿದ್ದಂತೆ ಸಿಟ್ಟಾಗಿದ್ದಾರೆ. ಈ ನಿಯೋಗದಲ್ಲೇ ಇದ್ದ ಮುಸ್ಲಿಂ ಜಮಾತ್ ಮುಖ್ಯಸ್ಥ ಮೊಹಮ್ಮದ್ ಸಾದ್, ಗಲಭೆಯಲ್ಲಿ ಕಾಣಿಸಿಕೊಂಡವವರೆಲ್ಲರೂ ಬೆಂಕಿ ಹಚ್ಚಿಲ್ಲ. ಕೆಲವರು ಅಲ್ಲಿಗೆ ಬಂದಿದ್ದಾರಷ್ಟೇ. ಹಾಗಾಗಿ, ಬಿಟ್ಟು ಕಳುಹಿಸಿ ಅಂತ ಮನವಿ ಮಾಡಿದ್ದೇವೆ ಎಂದಿದ್ದಾರೆ.
ಇದೇ ವೇಳೆ, ಒಂದು ವಾರದಿಂದ ಹೇರಿರುವ ಕರ್ಫ್ಯೂವನ್ನು ಸಡಿಲಿಸಿ ಎಂದು ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ. ಕೆಲ ಕಾಂಗ್ರೆಸ್ ನಾಯಕರು ಗಲಭೆಕೋರರು ಅಮಾಯಕರು ಎಂದು ಹೇಳುತ್ತಿರುವ ಬೆನ್ನಲ್ಲೇ ಜನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಕಾಂಗ್ರೆಸ್‍ಗೆ ‘ಪಬ್ಲಿಕ್’ ಪ್ರಶ್ನೆಗಳು
1. ಡಿ.ಜೆ. ಹಳ್ಳಿ ಗಲಭೆ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಅಷ್ಟರಲ್ಲಿ ಕ್ಲೀನ್‍ಚಿಟ್ ನೀಡಲು ಕಾಂಗ್ರೆಸ್ ನಾಯಕರ್ಯಾರು?
2. ಗಲಭೆಕೋರರಲ್ಲಿ ಕೆಲವರು ಅಮಾಯಕರಿದ್ದರೆ ಘಟನಾ ಸ್ಥಳದಲ್ಲಿ ಇವರಿಗೇನು ಕೆಲಸ?
3. ಗಲಭೆಕೋರರಲ್ಲಿರೋ ಅಪ್ರಾಪ್ತರನ್ನು ಬಿಟ್ಟು ಬಿಡಬೇಕಾ? ತಪ್ಪು ಮಾಡಿದರೂ ಕ್ಷಮಿಸಿ ಬಿಡಬೇಕಾ?
4. ಅಪ್ರಾಪ್ತರನ್ನು ಎಲ್ಲಿಗೆ ಕಳುಹಿಸಬೇಕು? ಏನ್ ಮಾಡಬೇಕು? ಅಂತ ಕಾನೂನು ನಿರ್ಧರಿಸುತ್ತೆ. ಇದನ್ನು ನಿರ್ಧರಿಸಲು ಕಾಂಗ್ರೆಸ್ ನಾಯಕರು ಯಾರು?
5. ಗಲಭೆಕೋರರ ಬಗ್ಗೆಯಷ್ಟೇ ಮಾತನಾಡುವ ಕಾಂಗ್ರೆಸ್ಸಿಗೆ ಮನೆ ಕಳೆದುಕೊಂಡವರು, ವಾಹನ ಕಳೆದುಕೊಂಡವರು ನೆನಪಾಗುತ್ತಿಲ್ವಾ?
6. ಗಲಭೆಯಿಂದ ಡಿ.ಜೆ. ಹಳ್ಳಿ ಹೊತ್ತಿ ಉರಿಯುತ್ತಿದ್ದಾಗ ಈ ನಾಯಕರೆಲ್ಲ ಎಲ್ಲಿ ಹೋಗಿದ್ದರು? ಈಗ ನೆನಪಾಯ್ತಾ?