ಬೆಂಗಳೂರು: 590 ಕೋಟಿ ರೂ. ಮೊತ್ತದ ರಕ್ಷಣಾ ಯೋಜನೆಯನ್ನು ಬೆಂಗಳೂರು ಮೂಲದ ಪೀಣ್ಯದ ಕಂಪನಿ ಪಡೆದುಕೊಂಡಿದೆ.
ಅಲ್ಫಾ ಡಿಸೈನ್ ಟೆಕ್ನಾಲಜೀಸ್ ಕಂಪನಿ ಕೆಲ ದಿನಗಳ ಹಿಂದೆ ಪಿಚೋರಾ ಕ್ಷಿಪಣಿ ಮತ್ತು ರೇಡಾರ್ ವ್ಯವಸ್ಥೆಯ ಉನ್ನತೀಕರಣ, ಡಿಜಟಲೀಕರಣ ಸಂಬಂಧ ರಕ್ಷಣಾ ಸಚಿವಾಲಯದ ಜೊತೆ ಸಹಿ ಹಾಕಿದೆ.
30 ವರ್ಷದ ಹಿಂದಿನ ಪಿಚೋರಾ ಕ್ಷಿಪಣಿ ಮತ್ತು ರೇಡಾರ್ ವ್ಯವಸ್ಥೆ ಭಾರತೀಯ ವಾಯುಸೇನೆಯಲ್ಲಿದ್ದು ಈಗ ಇದು ಹಳೆಯದಾಗಿದೆ. ಭಾರತೀಯ ವಾಯುಸೇನೆ ಈ ವ್ಯವಸ್ಥೆಯನ್ನು ಉನ್ನತೀಕರಿಸಲು ಟೆಂಡರ್ ಕರೆದಿತ್ತು. ಇದನ್ನೂ ಓದಿ: ರಫೇಲ್ ಡೀಲ್ – ಆಫ್‌ಸೆಟ್ ನಿಯಮವನ್ನೇ ಕೈಬಿಟ್ಟ ಸರ್ಕಾರ
ಅಲ್ಫಾ ಡಿಸೈನ್ ಟೆಕ್ನಾಲಜೀಸ್ ಕಂಪನಿಯ ಮುಖ್ಯಸ್ಥ ಮತ್ತು ನಿರ್ದೇಶಕ ನಿವೃತ್ತ ಕರ್ನಲ್ ಎಚ್‌ಎಸ್ ಶಂಕರ್ ಪ್ರತಿಕ್ರಿಯಿಸಿ, ಮುಂದಿನ 4 ವರ್ಷದಲ್ಲಿ ರಷ್ಯಾದ ಸಹಕಾರದೊಂದಿಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಇದು ರಾಷ್ಟ್ರೀಯ ಮಹತ್ವ ಪಡೆದ ಯೋಜನೆಯಾಗಿದೆ. ಶೀಘ್ರವೇ ಮುಂದೆ ಅಲ್ಫಾ ಡಿಸೈನ್ ಮತ್ತು ಇತರೇ ಭಾರತದ ಕಂಪನಿಗಳು ಈಗಲೂ ಬಳಕೆಯಲ್ಲಿರುವ ಹಲವು ವರ್ಷಗಳ ಹಿಂದಿನ ರೇಡಾರ್ ಮತ್ತು ಕ್ಷಿಪಣಿ ವ್ಯವಸ್ಥೆಯನ್ನು ಉನ್ನತೀಕರಿಸಲಿವೆ. ಹೊಸ ವ್ಯವಸ್ಥೆಯನ್ನು ಖರೀದಿಸುವ ಬದಲು ಈಗ ಇರುವ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಿದರೆ ಖರ್ಚು ಕಡಿಮೆ ಎಂದು ಕರ್ನಲ್ ಎಚ್‌ಎಸ್ ಶಂಕರ್ ತಿಳಿಸಿದರು.
ಉನ್ನತೀಕರಣ ಮಾಡಬೇಕಾದರೆ ಹಲವು ಸಾಧನಗಳು ಸ್ವದೇಶದಲ್ಲೇ ತಯಾರಾಗಬೇಕು. ವಿಶೇಷವಾಗಿ ರೇಡಾರ್ ಟ್ರಾನ್ಸ್‌ಮಿಟರ್, ಥರ್ಮಲ್ ಇಮೇಜ್ ಬೇಸ್ಡ್ ಎಲೆಕ್ಟ್ರೋ ಆಪ್ಟಿಕಲ್ ಸಿಸ್ಟಂ, ಸಂವಹನ ಸಾಧನಗಳು, ಕಂಟ್ರೋಲ್ ಕ್ಯಾಬಿನ್, ಕೇಬಲ್ ಇತ್ಯಾದಿಗಳನ್ನು ತಯಾರಿಸಬೇಕಾಗುತ್ತದೆ.
ಈ ಯೋಜನೆಯ ಅನ್ವಯ ಅಲ್ಫಾ ಡಿಸೈನ್ ಕಂಪನಿ 16 ಪಿಚೋರಾ ಕ್ಷಿಪಣಿ ವ್ಯವಸ್ಥೆಯನ್ನು ಉನ್ನತೀಕರಿಸಲಿದೆ. ಈ ಯೋಜನೆ ಯಶಸ್ವಿಯಾದ ಬಳಿಕ ಮತ್ತೆ 8 ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ಉತ್ಸಾಹವನ್ನು ಕಂಪನಿ ತೋರಿಸಿದೆ.
ಪಿಚೋರಾ ಕ್ಷಿಪಣಿಯನ್ನು 1961ರಲ್ಲಿ ರಷ್ಯಾ ಅಭಿವೃದ್ಧಿ ಪಡಿಸಿದ್ದು, ಈಗಲೂ ಹಲವು ದೇಶಗಳ ವಾಯುಸೇನೆಗಳು ಈ ಕ್ಷಿಪಣಿಯನ್ನು ಬಳಕೆ ಮಾಡುತ್ತಿವೆ. ಭಾರತ ಈಗ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಸ್ವದೇಶಿ ಕಂಪನಿಗೆ ಕ್ಷಿಪಣಿಯನ್ನು ಮೇಲ್ದರ್ಜೆಗೆ ಏರಿಸಲು ಮುಂದಾಗುತ್ತಿದೆ.