ಬೆಂಗಳೂರಿನ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ಹೆಲಿಪೋರ್ಟ್ ನಿರ್ಮಾಣ

Public TV
2 Min Read
CPY Narayangowda 1

ಬೆಂಗಳೂರು: ಹೆಲಿ ಟೂರಿಸಂಗೆ ಬೆಂಗಳೂರಿನ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರ ಬಳಸಿಕೊಳ್ಳುವ ಸಂಬಂಧ ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಡುವೆ ಒಪ್ಪಂದ ಮಾಡಿಕೊಳ್ಳಲು ವಿಧಾನಸೌಧದ ಪ್ರವಾಸೋದ್ಯಮ ಸಚಿವರ ಕಛೇರಿಯಲ್ಲಿ ಮಹತ್ವದ ಸಭೆ ನಡೆಯಿತು.

ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಸಿ.ಪಿ. ಯೋಗೇಶ್ವರ್, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಯೋಜನೆ, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಗಳಾದ ಪಂಕಜ್ ಕುಮಾರ್ ಪಾಂಡೆ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ 6 ಹೆಲಿಕಾಪ್ಟರ್ ಗಳು ಒಟ್ಟಿಗೆ ಲ್ಯಾಂಡಿಂಗ್ ಹಾಗೂ ಟೇಕಾಫ್ ಆಗಲು ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು. ದೇಶ ವಿದೇಶ ಹಾಗೂ ಹೊರ ರಾಜ್ಯಗಳಿಂದ ರಾಜಧಾನಿ ಬೆಂಗಳೂರಿಗೆ ಆಗಮಿಸುವ ಪ್ರವಾಸಿಗರು ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಿಂದ ರಾಜ್ಯದ ಇತರೆ ಜಿಲ್ಲೆಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ತೆರಳಲು ಅನುಕೂಲ ಮಾಡಿಕೊಡುವ ದೃಷ್ಠಿಯಿಂದ ಈ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ರವರು ಹೇಳಿದರು.

ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ ಸೇರಿದಂತೆ ನೆರೆಯ ರಾಜ್ಯಗಳನ್ನು ಸೇರಿಸಿ ಪ್ರವಾಸೋದ್ಯಮ ಸರ್ಕ್ಯೂಟ್ ರೂಪಿಸಲಾಗುವುದು. ರಾಜ್ಯದಲ್ಲಿ ಹೆಲಿ ಪೋರ್ಟ್, ಹೆಲಿಪ್ಯಾಡ್ ನಿರ್ಮಾಣ ಸೇರಿದಂತೆ ಹೆಲಿಟೂರಿಸಂ ಅಭಿವೃದ್ಧಿಪಡಿಸುವ ಯೋಜನೆಗಳಿಗೆ ಬಂಡವಾಳ ಹೂಡಲು ಮೂರು ಮಂದಿ ಖಾಸಗಿ ಉದ್ಯಮಿಗಳು ಮುಂದೆ ಬಂದಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಹಂತ ಹಂತವಾಗಿ ಹೆಲಿಟೂರಿಸಂ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ ಎಂದು ಸಚಿವ ಯೋಗೇಶ್ವರ ತಿಳಿಸಿದರು.

CPY Narayangowda 1 medium

ಮೈಸೂರು, ಕಲಬುರಗಿ, ಮಂಗಳೂರು, ಬಳ್ಳಾರಿ ಹಾಗೂ ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ ಹೆಲಿಪೋರ್ಟ್ ನಿರ್ಮಾಣ ಮಾಡಿ ಬೆಂಗಳೂರಿನ ಜಕ್ಕೂರು ವೈಮಾನಿಕ ಕೇಂದ್ರದ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹೆಲಿಕಾಪ್ಟರ್ ಪ್ರಯಾಣ ಸಂಪರ್ಕ ಕಲ್ಪಿಸುವುದಾಗಿ ಸಚಿವ ಯೋಗೇಶ್ವರ್ ರವರು ತಿಳಿಸಿದರು.

ಪ್ರವಾಸಿಗರಿಗೆ, ಗಣ್ಯ ವ್ಯಕ್ತಿಗಳಿಗೆ, ಹಾಗೂ ತುರ್ತು ಸಂದರ್ಭದಲ್ಲಿ ರಾಜ್ಯದ ಎಲ್ಲಾ ಭಾಗಗಳಿಗೆ ತಲುಪಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೆಲಿಪೋರ್ಟ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಸ್ತೆಯ ಮೂಲಕ ಪ್ರಯಾಣ ಮಾಡಿದರೆ ಸಾಕಷ್ಟು ಸಮಯ ಬೇಕಾಗುತ್ತದೆ. ಸಮಯ ಉಳಿಸಲು ಹಾಗೂ ರಸ್ತೆ ಮಾರ್ಗ ಬಳಕೆಯಿಂದ ತಪ್ಪಿಸಲು ರಾಜ್ಯದಲ್ಲಿ ಅಗತ್ಯವಿರುವ ಕಡೆಯಲ್ಲಾ ಹೆಲಿ ಪ್ಯಾಡ್ ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಸಚಿವ ಯೋಗೇಶ್ವರ ತಿಳಿಸಿದರು.

ಇದೇ ವೇಳೆ ಮಾತನಾಡಿದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವರಾದ ನಾರಾಯಣಗೌಡ, ಆರೋಗ್ಯ ಇಲಾಖೆಯನ್ನು ಜೊತೆಗೆ ಸೇರಿಸಿಕೊಂಡು ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಸೌಕರ್ಯಗಳನ್ನು ಅಭಿವೃದ್ಧಿಪಡಿಸೋಣ. ಕೇವಲ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸೀಮಿತವಾಗದೇ ಆರೋಗ್ಯ ಕ್ಷೇತ್ರ, ನೈಸರ್ಗಿಕ ವಿಪತ್ತು ಸಂಭವಿಸಿದಾಗ ಹೆಲಿಕಾಪ್ಟರ್ ಸೇವೆಯನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಲ್ಲಿರುವ ಹಣದಿಂದ ಮೊದಲ ಹಂತದಲ್ಲಿ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತ್ವರಿತವಾಗಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು. ಅತೀ ಶೀಘ್ರದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರಕ್ಕೆ ತೆರಳಿ ಹೆಲಿಟೂರಿಸಂ ಯೋಜನೆಯ ಸಂಬಂಧ ಸ್ಥಳ ಪರಿಶೀಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *