ಬೆಂಗಳೂರಿನ ಒಂದು ಲಕ್ಷ ಕುಟುಂಬಗಳಿಗೆ ಕೇವಲ ಒಂದು ಲಕ್ಷ ರೂ.ಗಳಲ್ಲಿ ಮನೆ: ಸಚಿವ ವಿ.ಸೋಮಣ್ಣ

Public TV
1 Min Read
SOMANNA 5

ಬೆಂಗಳೂರು: ನಗರದಲ್ಲಿ ಮನೆ ಇಲ್ಲದವರಿಗೆ ಕೇವಲ 1 ಲಕ್ಷ ರೂ.ಗಳಲ್ಲಿ ಮನೆ ದೊರೆಕಿಸಿಕೊಡುವ ಮಹತ್ತರವಾದ ಪ್ರಧಾನಮಂತ್ರಿ ಆವಾಸ್ ಯೋಜನೆ ತೀವ್ರ ಗತಿಯಲ್ಲಿ ಅಭಿವೃದ್ಧಿಯ ಪಥದಲ್ಲಿದ್ದು, ವಸತಿರಹಿತರೆಲ್ಲರೂ ಸೂರು ಹೊಂದುವ ದಿನಗಳು ಸನಿಹದಲ್ಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಸಚಿವರು ಇಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ವಾರ್ಡಿನಲ್ಲಿ ಕೋವಿಡ್ ಸಂಕಷ್ಟಕ್ಕೆ ಒಳಗಾದ ಆರ್ಥಿಕವಾಗಿ ಹಿಂದುಳಿದವರು, ಬಡವರು, ಕಾರ್ಮಿಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಧಾನ್ಯ ಕಿಟ್’ಗಳನ್ನು ವಿತರಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ ವಸತಿರಹಿತರಿಗೆ ನೀಡಲು 1 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತಿದೆ, ತಾವು ಸಚಿವರಾದ ನಂತರ 48,000 ಮನೆಗಳಿಗೆ ಚಾಲನೆ ನೀಡಲಾಗಿದ್ದು, ಇನ್ನು 6 ತಿಂಗಳಲ್ಲಿ ಅರ್ಹರಿಗೆ ವಿತರಿಸುವ ಕಾರ್ಯ ಆರಂಭವಾಗಲಿದೆ ಎಂದು ಹೇಳಿದ ಸಚಿವರು, 5 ಲಕ್ಷ ರೂ. ಮೌಲ್ಯದ ಈ ಮನೆ ಮಾಲೀಕತ್ವ ಹೊಂದಲು ಫಲಾನುಭವಿಗಳು 1 ಲಕ್ಷ ರೂ. ನೀಡಿದರೆ ಸಾಕು, ಉಳಿದ ಮೊಬಲಗನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಗೂ ಸಾಲದ ಮೂಲಕ ಭರಿಸಲಾಗುವುದು ಎಂದು ತಿಳಿಸಿದರು.

ಈ ತಿಂಗಳ 21ನೆಯ ದಿನಾಂಕದಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ನಿತ್ಯ 4000 ಮಂದಿಗೆ ಕೊರೊನಾ ವ್ಯಾಕ್ಸಿನ್ ನೀಡುವ ಕಾರ್ಯಕ್ರಮ ಆರಂಭವಾಗಲಿದೆ. ಈ ಕಾಯಿಲೆಯಿಂದ ಯಾರೂ ಭಯಭೀತರಾಗಬೇಡಿ, ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆದುಕೊಳ್ಳಿ ಎಂದು ಸಚಿವರು ಸಲಹೆ ಮಾಡಿದರು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮುಖ್ಯ ಅತಿಥಿಗಳಾಗಿದ್ದು, ಸಚಿವ ಸೋಮಣ್ಣನವರು ಹಸಿದವರಿಗೆ ಅನ್ನ ನೀಡುವ ಹಾಗೂ ನೆಲೆ ಇಲ್ಲದವರಿಗೆ ಮನೆ ನೀಡುವ ಗಾರುಡಿಗ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಮಂಡಲಾಧ್ಯಕ್ಷ ವಿಶ್ವನಾಥಗೌಡ, ಯುವನಾಯಕ ಡಾ.ಅರುಣ್ ಸೋಮಣ್ಣ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ದಾಸೇಗೌಡ, ವಾಗೀಶ್, ಶ್ರೀಮತಿ ಶಿಲ್ಪಾ ಶ್ರೀಧರ್, ಮೋಹನ್ ಕುಮಾರ್, ಸಿದ್ಧಾರ್ಥ್ ಮುಂತಾದ ಮುಖಂಡರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *