ಬೆಂಗಳೂರು: ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯ ಕಮಾಂಡ್ ಆಸ್ಪತ್ರೆ ಬಳಿ ಇರುವ ಸೇನೆಗೆ ಸೇರಿದ ಎಎಸ್‍ಸಿ ಕೇಂದ್ರ ಮತ್ತು ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಬಗ್ಗೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸೇನಾಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ಮಂಗಳವಾರ ಎಎಸ್‍ಸಿ ಕಮಾಂಡರ್ ಲೆಫ್ಟಿನೆಂಟ್ ಬಿ.ಕೆ.ರೆಸ್‍ಪಾಸ್ ವಾಲ್ ಅವರ ಜೊತೆ ಚರ್ಚಿಸಿದ ಡಿಸಿಎಂ, ಎಎಸ್‍ಸಿ ಸೆಂಟರ್‍ನಲ್ಲಿ ಕನಿಷ್ಠ 500 ಬೆಡ್‍ಗಳ ಕೋವಿಡ್ ಕೇಂದ್ರ ಸ್ಥಾಪನೆಯ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಈ ಕೋವಿಡ್ ಕೇರ್‍ಗೆ ಅಗತ್ಯ ಮೂಲಸೌಕರ್ಯವನ್ನು ಸರ್ಕಾರ ಒದಗಿಸಲಿದೆ. ಸೇನೆ ವತಿಯಿಂದ ವೈದ್ಯರು, ಸಿಬ್ಬಂದಿ ಮತ್ತು ಅರೆವೈದ್ಯ ಸಿಬ್ಬಂದಿಯನ್ನು ಒದಗಿಸುವಂತೆ ಕೋರಿದರು.
ಎರಡನೇ ಮತ್ತು ಮೂರನೇ ಅಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಅವಕಾಶ ನೀಡಬೇಕು. ವಿವಿಧ ಹಂತಗಳಲ್ಲಿ ಇಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಬಹುದು ಎಂದರು.
ಇದಕ್ಕೆ ಬಿ.ಕೆ.ರೆಸ್‍ಪಾಸ್ ವಾಲ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೋವಿಡ್ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಸೇನೆಯೂ ಹೆಗಲು ಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಎಸ್‍ಸಿ ಕೇಂದ್ರದಲ್ಲಿ ಕೋವಿಡ್ ಚಿಕಿತ್ಸೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಲೆಫ್ಟಿನೆಂಟ್ ಬಿ.ಕೆ.ರೆಸ್‍ಪಾಸ್ ವಾಲ್ ಅವರು ಡಿಸಿಎಂ ಅವರಿಗೆ ಮಾಹಿತಿ ನೀಡಿ, ಸೌಲಭ್ಯಗಳನ್ನು ಸಹ ತೋರಿಸಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಡಿಸಿಎಂ ಕಾರ್ಯದರ್ಶಿ ಪ್ರದೀಪ್ ಪ್ರಭಾಕರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಸರ್ಕಾರದ ಸಲಹೆಗಾರ ಜಿ.ಎಂ.ಬಾಬು ಹಾಗೂ ಇತರರು ಇದ್ದರು.