– ಪೊಲೀಸ್, ಯೋಧರು ಸೇರಿ 926 ಜನರಿಗೆ ಶೌರ್ಯ ಪದಕ
ನವದೆಹಲಿ: ಮೂಲತಃ ಬೆಂಗಳೂರಿನವರಾದ ಮೇಜರ್ ಅನಿಲ್ ಅರಸ್ ಅವರಿಗೆ ಶೌರ್ಯ ಚಕ್ರ ಸಿಕ್ಕಿದೆ.
ದೇಶಕ್ಕಾಗಿ ಹೋರಾಡುವ ಮೂಲಕ ಸೇವೆಯಲ್ಲಿ ಧೈರ್ಯ, ಸಾಹಸ ಪ್ರದರ್ಶಿಸಿದ ನಾಲ್ವರು ಯೋಧರಿಗೆ ‘ಶೌರ್ಯ ಚಕ್ರ’ ಪ್ರಶಸ್ತಿ ನೀಡುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದು, ಇದರಲ್ಲಿ ಬೆಂಗಳೂರಿನವರಾದ ಅನಿಲ್ ಅರಸ್ ಅವರ ಹೆಸರು ಸಹ ಇದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಮೇಲೆ ಕಣ್ಣಿಡುವ ಗುಪ್ತಚರ ದಳದಲ್ಲಿ ಮೇಜರ್ ಅನಿಲ್ ಅರಸ್ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಕುರಿತು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದ್ದು, ಜಮ್ಮು-ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುವ ಮೂಲಕ ಸಾಹಸ ತೋರಿದ ಪ್ಯಾರಾಚೂಟ್ ರೆಜಿಮೆಂಟ್ ನ ಲೆಫ್ಟಿನೆಂಟ್ ಕರ್ನಲ್ ಕ್ರಿಷನ್ ಸಿಂಗ್ ರಾವತ್, 4 ಮರಾಠಾ ಲೈಟ್ ಇನ್‍ಫೆಂಟ್ರಿಯ ಮೇಜರ್ ಅನಿಲ್ ಅರಸ್, ರಜಪೂತ್ ರೆಜಿಮೆಂಟ್ ನ ಹವಾಲ್ದಾರ್ ಅಲೋಕ್ ಕುಮಾರ್ ದುಬೆ ಹಾಗೂ ವಾಯುಪಡೆಯ ವಿಂಗ್ ಕಮಾಂಡರ್ ವಿಶಾಕ್ ನಾಯರ್ ಅವರಿಗೆ ‘ಶೌರ್ಯ ಚಕ್ರ’ ಪ್ರಕಟಿಸಲಾಗಿದೆ.
ಇವರು ಜಮ್ಮು-ಕಾಶ್ಮೀರದಲ್ಲಿ ವಿವಿಧ ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ದೇಶಕ್ಕಾಗಿ ಹಾಗೂ ಸಿಬ್ಬಂದಿ ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದಾರೆ. ಇವರ ಸಾಹಸವನ್ನು ಮೆಚ್ಚಿ ಶೌರ್ಯ ಚಕ್ರ ನೀಡಲಾಗಿದೆ.
ಯೋಧರು ಮಾತ್ರವಲ್ಲ ಸಾಹಸ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಸಿ ಧೈರ್ಯ, ಸಾಹಸ ಪ್ರದರ್ಶಿಸಿದ ಪೊಲೀಸ್ ಹಾಗೂ ಸೇನಾಪಡೆಗಳಿಗೆ ಒಟ್ಟು 926 ಶೌರ್ಯ ಪದಕವನ್ನು ಘೋಷಿಸಲಾಗಿದೆ. ಸಾಹಸ ಮೆರೆದ 21 ಪೊಲೀಸರಿಗೆ ‘ಶೌರ್ಯ ಪದಕ’, ಅತ್ಯುತ್ತಮ ಸೇವೆಗಾಗಿ 80 ಪೊಲೀಸರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ ಹಾಗೂ ಪ್ರಶಂಸಾ ಸೇವೆಗಾಗಿ 631 ಸಿಬ್ಬಂದಿಗೆ ಪ್ರಶಂಸಾ ಪದಕ ನೀಡಿ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆ ಅತಿ ಹೆಚ್ಚು 81 ಪದಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದೆ. ಸಿಆರ್ಪಿಎಫ್ 55 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆ 23, ದೆಹಲಿ ಪೊಲೀಸ್ ಇಲಾಖೆ 16, ಆಂಧ್ರ ಪ್ರದೇಶ ಪೊಲೀಸ್ ಇಲಾಖೆ ತಲಾ 16, ಮಹಾರಾಷ್ಟ್ರ ಪೊಲೀಸ್ ಇಲಾಖೆ, ತೆಲಂಗಾಣ ಪೊಲೀಸ್ ಇಲಾಖೆ ತಲಾ 14 ಹಾಗೂ ಜಾರ್ಖಂಡ್ ಪೊಲೀಸ್ ಇಲಾಖೆ 12 ಪದಕಗಳನ್ನು ಪಡೆದಿವೆ.