ಬೆಂಗಳೂರು: ಇಂದು ಮತ್ತೆ ವರುಣನ ಅಬ್ಬರ ಜೋರಾಗಿದ್ದು, ಸಂಜೆಯಿಂದಲೇ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇತ್ತ ಕೊಡಗು, ಶಿವಮೊಗ್ಗ, ಕೋಲಾರ, ಬೀದರ್ ಜಿಲ್ಲೆಗಳಲ್ಲಿ ಮಳೆ ಆರಂಭಗೊಂಡಿದೆ. ಮಂಗಳವಾರ ರಾತ್ರಿಯಿಂದಲೇ ಮಳೆ ಆರ್ಭಟ ಆರಂಭಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಂಗಳವಾರ ಸುರಿದ ಮಳೆಗೆ ರಾಜ್ಯದ ಬಹುತೇಕ ಕೆರೆ-ಕುಂಟೆಗಳು ಭರ್ತಿಯಾಗಿವೆ.
ಇಂದು ಮಧ್ಯಾಹ್ನದಿಂದಲೇ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆಯಿಂದ ಮಲ್ಲೇಶ್ವರಂ, ವಿಧಾನಸೌಧ, ಕಾರ್ಪೋರೇಷನ್, ವಿಲ್ಸನ್ ಗಾರ್ಡನ್, ಬನ್ನೇರುಘಟ್ಟ ರಸ್ತೆಯಲ್ಲಿ ಭಾರೀ ಮಳೆ ಆಗುತ್ತಿದೆ. ಭಾರೀ ಮಳೆ ಹಿನ್ನೆಲೆ ನಗರದ ಬಹುತೇಕ ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆಯುಂಟಾಗಿದ್ದು, ವಾಹನಗಳು ನಿಧಾನಗತಿ ಸಾಗುತ್ತಿವೆ. ಮಳೆಯಲ್ಲಿ ಸಿಲುಕಿ ವಾಹನ ಸವಾರರು ಸಿಲುಕಿ ಪರದಾಡುತ್ತಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮಂಗಳವಾರ ಮಧ್ಯರಾತ್ರಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದು, ಸಂಜೆ 5 ಗಂಟೆಯಿಂದ ಜಿಲ್ಲೆಯ ಹಲವೆಡೆ ಜೋರು ಮಳೆಯಾಗುತ್ತಿದೆ. ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಜಿಲ್ಲೆಯ ಬಹುತೇಕ ಕೆರೆ ಕುಂಟೆಗಳು ತುಂಬಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸದ್ಯಕ್ಕೆ ಮಳೆಯಿಂದ ರಸ್ತೆಗಳ ತುಂಬ ನೀರು ಆವರಿಸಿ, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಕೋಲಾರ-ಚಿಕ್ಕಬಳ್ಳಾಪುರ ಮುಖ್ಯ ಸಂಗೊಂಡಹಳ್ಳಿ ಬಳಿ ರಸ್ತೆಯಲ್ಲಿರುವ ರೈಲ್ವೇ ಅಂಡರ್ ಪಾಸ್ ನಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರ ಪರದಾಡಬೇಕಾಯಿತು. ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ ಮಾಡಿರುವುದೆ ಇದಕ್ಕೆ ಕಾರಣ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಗಡಿ ಜಿಲ್ಲೆ ಬೀದರ್ ನಲ್ಲಿ ಸತತ ಒಂದು ಗಂಟೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಬೀದರ್, ಔರಾದ್, ಬಸವಕಲ್ಯಾಣ, ಭಾಲ್ಕಿ ಸೇರಿದಂತೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಎರಡು ದಿನಗಳಿಂದ ಸತತವಾಗಿ ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿದ್ದು ಜಿಲ್ಲೆಯ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ. ಹವಾಮಾನ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬಾರಿ ಮಳೆಯಾಗಲಿದೆ.
ಇನ್ನು ಶಿವಮೊಗ್ಗದಲ್ಲಿ ಅರ್ಧಗಂಟೆಗೂ ಹೆಚ್ಚು ಮಳೆಯಾಗಿದೆ. ಇತ್ತ ಕೊಡಗು ಜಿಲ್ಲೆಯ ಮಡಿಕೇರಿ, ಭಾಗಮಂಡಲ ಸುತ್ತಮುತ್ತ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ನಾಲ್ಕು ದಿನಗಳಿಂದ ಬಿಡುವು ನೀಡಿದ್ದ ಮಳೆ ಇಂದು ಸಂಜೆಯಿಂದ ಆರಂಭಗೊಂಡಿದೆ. ಮಂಗಳವಾರ ರಾತ್ರಿ ಸುರಿದ ಮಳೆಗೆ ಚಿತ್ರದುರ್ಗದ ಚಂದ್ರವಳ್ಳಿ ಕೆರೆ ಬಳಿ ಜಲಪಾತ ನಿರ್ಮಾಣವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.