ಬೆಂಗಳೂರು: ನಾಳೆ ವಿರೋಧ ಪಕ್ಷಗಳ ನಾಯಕರು, ರಾಜ್ಯಪಾಲರ ಜೊತೆ ಸಿಎಂ ಯಡಿಯೂರಪ್ಪನವರು ವಿಡಿಯೋ ಕಾನ್ಫರೆನ್ಸ್ ಮಾಡಿದ ಬಳಿಕ ಕಟ್ಟುನಿಟ್ಟಿನ ಕ್ರಮವನ್ನು ಘೋಷಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಕೊರೊನಾ ನಿಯಂತ್ರಣ ಸಂಬಂಧ ಇಂದು ಬೆಂಗಳೂರಿನ ಶಾಸಕರು, ಸಂಸದರು, ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಸಭೆ ನಡೆಯಿತು. ಈ ಸಭೆಗೆ ಮಣಿಪಾಲ ಆಸ್ಪತ್ರೆಯಿಂದ ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಸಭೆಯ ಬಳಿಕ ಅಶೋಕ್ ಅವರು ಮಾಧ್ಯಮಗಳಿಗೆ ಸಭೆಯಲ್ಲಿ ಚರ್ಚೆಯಾದ ವಿಷಯದ ಬಗ್ಗೆ ವಿವರ ನೀಡಿದರು.
Advertisement
Advertisement
ಅಶೋಕ್ ಹೇಳಿದ್ದು ಏನು?
ಸರ್ಕಾರಿ ಮತ್ತು ದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. ಆದರೆ ಸಣ್ಣ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮಸ್ಯೆ ಇದೆ. ಅವರಲ್ಲಿ ಸ್ಟೋರೇಜ್ ಮಾಡುವ ಸಾಮರ್ಥ್ಯ ಇಲ್ಲದ ಕಾರಣ ಸಮಸ್ಯೆ ಆಗುತ್ತಿದೆ. ಈ ಸಮಸ್ಯೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಆಕ್ಸಿಜನ್ ಶೀಘ್ರವೇ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಸಂಬಂಧ ಜಿಂದಾಲ್ ಜೊತೆ ಮಾತನಾಡಲಾಗಿದೆ.
Advertisement
ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಶೇ.50 ರಷ್ಟು ಬೆಡ್ ನೀಡಬೇಕೆಂಬ ಆದೇಶವಿದೆ. ಆದರೆ ಶೇ.10ರಷ್ಟು ಬೆಡ್‌ಗಳನ್ನು ಮೀಸಲಿಡದ ಕಾರಣ ಈಗ ಸಮಸ್ಯೆ ಆಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈಗಾಗಲೇ ಕೋವಿಡ್ ಅಲ್ಲದ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಕಾರಣ ಬೆಡ್ ಕಡಿಮೆಯಾಗಿದೆ. ಕೂಡಲೇ ಈ ರೋಗಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆಸ್ಪತ್ರೆಯ ಹತ್ತಿರದಲ್ಲಿರುವ ತ್ರಿ ಸ್ಟಾರ್ ಹೋಟೆಲ್‌ನಲ್ಲಿ ಈ ರೋಗಿಗಳನ್ನು ಶಿಫ್ಟ್ ಮಾಡಲು ಮುಂದಾಗುತ್ತಿದ್ದೇವೆ. ವೈದ್ಯರು ಈ ರೋಗಿಗಳ ಮೇಲೆ ನಿಗಾ ಇಡಲಿದ್ದಾರೆ. 1 ವಾರದಲ್ಲಿ ರೋಗಿಗಳನ್ನು ಶಿಫ್ಟ್ ಮಾಡಿದ ನಂತರ ಬೆಡ್‌ಗಳ ಸಂಖ್ಯೆ ಹೆಚ್ಚಾಗಲಿದೆ. ಅಷ್ಟೇ ಅಲ್ಲದೇ ಬೆಡ್ ಸಮಸ್ಯೆ ಪರಿಹರಿಸಲು ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗುವುದು. ಇವರನ್ನು ಸಾರ್ವಜನಿಕರು ಸಂಪರ್ಕ ಮಾಡಬಹುದು.
Advertisement
ಆಸ್ಪತ್ರೆಗಳು ಮಧ್ಯಾಹ್ನದ ನಂತರ ಕೋವಿಡ್‌ನಿಂದ ಮೃತಪಟ್ಟ ರೋಗಿಗಳನ್ನು ಬಿಡುಗಡೆ ಮಾಡುತ್ತಿರುವ ಕಾರಣ ಚಿತಾಗಾರದಲ್ಲಿ ಸಮಸ್ಯೆ ಆಗುತ್ತಿದೆ. ಹೀಗಾಗಿ ಬೆಳಗ್ಗೆ ಶವಗಳನ್ನು ನೀಡಲು ತಿಳಿಸಲಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ 3-4 ಕಡೆ ಕಟ್ಟಿಗೆಯ ಮೂಲಕ ಶವ ಸುಡಲು ಜಾಗವನ್ನು ನೋಡಲಾಗಿದೆ. ಒಂದು ವೇಳೆ ಮತ್ತಷ್ಟು ಸಮಸ್ಯೆಯಾದರೆ ಈ ಜಾಗಗಳನ್ನು ನಾವು ಬಳಸುತ್ತೇವೆ. ಕೋವಿಡ್ 19ನಿಂದ ಮೃತಪಟ್ಟ ಶವಗಳನ್ನು ಚಿತಾಗಾರಕ್ಕೆ ಉಚಿತವಾಗಿ ಸಾಗಿಸುವಂತೆ ಸೂಚಿಸಲಾಗಿದ್ದು, ಈ ಸಂಬಂಧ ಬೆಂಗಳೂರಿನಲ್ಲಿ 40 ಅಂಬುಲೆನ್ಸ್ ಗಳನ್ನು ಳನ್ನು ಮೀಸಲಿಡಲಾಗಿದೆ.
ಸಣ್ಣದಾಗಿ ಸಮಸ್ಯೆ ಕಾಣಿಸಿಕೊಂಡರೂ ಈಗ ಆಸ್ಪತ್ರೆಗೆ ಜನ ದಾಖಲಾಗುತ್ತಿದ್ದಾರೆ. ಕೆಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದ ಅಗತ್ಯ ಇರುವುದಿಲ್ಲ. ಈಗಾಗಲೇ 12 ಕೋವಿಡ್ ಕೇಂದ್ರಗಳಿದ್ದು, ಮತ್ತಷ್ಟು ಕೋವಿಡ್ ಕೇಂದ್ರಗಳನ್ನು ತೆರೆಯುತ್ತೇವೆ. ಜನರನ್ನು ಮೊದಲು ಇಲ್ಲಿಗೆ ತರಲಾಗುತ್ತದೆ. ಇಲ್ಲಿ ವೈದ್ಯರು ಪರೀಕ್ಷೆ ಮಾಡಿದ ಬಳಿಕ ಹೆಚ್ಚುವರಿ ಚಿಕಿತ್ಸೆ ಬೇಕಿದ್ದರೆ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗುತ್ತದೆ.
ಮುಂದಿನ 2 ತಿಂಗಳು ಕಷ್ಟದ ಸಂದರ್ಭವಾಗಿದ್ದು, ಎಲ್ಲರ ಸಹಕಾರ ಬೇಕು. ಕಳೆದ ವರ್ಷದಂತೆ ಕೊರೊನಾ ಸೋಂಕಿತರ ಕೈಗೆ ಸೀಲ್ ಹಾಕುವಂತೆ ಸಲಹೆ ಬಂದಿದೆ. ಸಭೆಯಲ್ಲಿ ಕೆಲವರು ಲಾಕ್‌ಡೌನ್ ಮಾಡುವುದು ಬೇಡ, ಕರ್ಫ್ಯೂ ವಿಧಿಸಬೇಕು ಎಂದು ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಎಲ್ಲವನ್ನೂ ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.