ಕೋಲಾರ: ಬೆಂಗಳೂರು ಗಲಭೆ ಹಿನ್ನೆಯಲ್ಲಿ ಕೋಲಾರ ಜಿಲ್ಲೆಯಾದ್ಯಂತ ಮುನ್ನಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಎಸ್‍ಪಿ ಕಾರ್ತಿಕ್ ರೆಡ್ಡಿ ತಿಳಿಸಿದರು.
ನಗರದ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದ್ದು, ಕಳೆದ ರಾತ್ರಿಯಿಂದಲೇ ನಗರದಲ್ಲಿ ಪೊಲೀಸರಿಂದ ಬೀಟ್ ಮಾಡಿಸಲಾಗಿದೆ . ಸಾಮಾಜಿಕ ಜಾಲ ತಾಣಗಳ ಮೇಲೂ ಹದ್ದಿನ ಕಣ್ಣಿಡಲಾಗಿದ್ದು, ಕೋಲಾರ ಜಿಲ್ಲೆಯಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಹೀಗಾಗಿ ಜಿಲ್ಲೆಯ ಜನ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಯಾವುದೇ ಗೊಂದಲ ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ. ಯಾರೂ ಸಹ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಗಲಭೆ ಬಳಿಕ ಸಾಕಷ್ಟು ಜನ ಕೋಲಾರದತ್ತ ಬಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದುವರೆಗೆ ಆ ರೀತಿಯ ಯಾವುದೇ ವ್ಯಕ್ತಿಗಳು ಕಂಡು ಬಂದಿಲ್ಲ. ಈ ವಿಚಾರವಾಗಿಯೂ ಇಲಾಖೆ ಎಚ್ಚರ ವಹಿಸಿದೆ. ಜನತೆ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು.