ಬೆಂಗಳೂರಿನಲ್ಲಿ ಕೊರೊನಾ ತಡೆಗೆ ಅಷ್ಟದಿಗ್ಬಂಧನ?

Public TV
2 Min Read
CM BSY 2

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾ ರಣಕೇಕೆಗೆ ಬ್ರೇಕ್ ಹಾಕಲು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಾಗಿದ್ದು, ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬೆಂಗಳೂರಿನ 8 ವಲಯಗಳಿಗೆ 8 ಸಚಿವರಿಗೆ ಉಸ್ತುವಾರಿ ವಹಿಸಲು ಚಿಂತನೆ ನಡೆಸಲಾಗಿದೆ.

ಸದ್ಯ ಚಿಂತನೆ ಕಾರ್ಯ ರೂಪಕ್ಕೆ ತರಲು ಸಿಎಂ ಬಿಎಸ್‍ವೈ ಅವರು, ವಲಯವಾರು ಸಚಿವರಿಂದ ಅಧ್ಯಯನ ಮಾಡಿ ಸೋಮವಾರದ ವೇಳೆಗೆ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ. ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದ ಕುರಿತು ಪ್ರಮುಖ ಚರ್ಚೆ ನಡೆಸಲಾಗಿದೆ. ಸದ್ಯ ಸಚಿವರು ನೀಡುವ ವರದಿಯ ಬಳಿಕ ಬೆಂಗಳೂರು ಹಾಫ್ ಲಾಕ್ ಡೌನ್ ಅಥವಾ ಫುಲ್ ಲಾಕ್ ಡೌನ್ ಬಗ್ಗೆ ಅಂತಿಮ ನಿರ್ಧಾರ ಮಾಡುವ ಸಾಧ್ಯತೆ ಇದೆ.

CM BSY COVID MEETING

ಕ್ಯಾಬಿನೆಟ್ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು, ಶನಿವಾರದ ಲಾಕ್‍ಡೌನ್ ಬಗ್ಗೆ ನಾಳೆ ನಿರ್ಧಾರ ಮಾಡಲಾಗುತ್ತದೆ. ಇವತ್ತು ಕೇವಲ ಅಭಿಪ್ರಾಯಕ್ಕೆ ಮಾತ್ರ ಸೀಮಿತ ಮಾಡಲಾಗಿದೆ. ಬೆಂಗಳೂರನ್ನು 8 ವಲಯಗಳಾಗಿ 8 ಸಚಿವರಿಗೆ ಉಸ್ತುವಾರಿ ವಹಿಸಲಾಗಿದೆ. ವಲಯಗಳಿಗೆ ಸಚಿವರ ತಂಡದ ನೇಮಕ ಮಾಡಿದ ಬಳಿಕ ಆಯಾ ತಂಡದ ವಲಯಗಳಿಗೆ ಭೇಟಿ ಕೊಡುತ್ತಾರೆ. ಉಳಿದಂತೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಮೆಡಿಕಲ್ ಗ್ಯಾಸ್ ಪೈಪ್ ಲೈನ್, ಬೆಡ್ ಹೆಚ್ಚಳ, ಅಕ್ಸಿಜನ್ ವ್ಯವಸ್ಥೆಗೆ 207 ಕೋಟಿ ರೂ. ಹಣ ಮಂಜೂರು ಮಾಡಲಾಗಿದೆ. ಕೊರೊನಾವನ್ನು ತೀವ್ರವಾಗಿ ತೆಗೆದುಕೊಂಡು ಟೆಸ್ಟ್ ವೇಗವನ್ನು ಹೆಚ್ಚಿಸಿಲು ಮುಂದಾಗಿದ್ದೇವೆ. ಆ ಮೂಲಕ ಕೊರೊನಾವನ್ನ ಭೇದಿಸುತ್ತೇವೆ ಎಂದರು.

Madhuswamy

ಬೆಂಗಳೂರಿನ ವಲಯಗಳಲ್ಲಿ ಹೆಚ್ಚು ಕಡಿಮೆಯಾದರೆ ಜವಾಬ್ದಾರಿ ವಹಿಸಿಕೊಂಡಿರುವ ಸಚಿವರೇ ಹೊಣೆ ಮಾಡಲಾಗುತ್ತದೆ. ಅಲ್ಲದೇ ಉಸ್ತುವಾರಿ ಸಚಿವರ ಅಡಿಯಲ್ಲಿ ಅಧಿಕಾರಿಗಳ ತಂಡದ ಮಾಡಿ ಅಲ್ಲಿನ ಕಾರ್ಪೊರೇಟರ್, ಅಧಿಕಾರಿಗಳು, ಜನಪ್ರತಿನಿಧಿಗಳ ತಂಡದ ರಚಿಸಲಾಗುತ್ತದೆ. ಕೂಡಲೇ ತಂಡದ ವಲಯಗಳಲ್ಲಿ ಇರುವ ಕಾಂಟೈನ್‍ಮೆಂಟ್ ಝೋನ್, ಸೋಂಕು ಹರಡಿರುವ ಪ್ರಮಾಣ, ಸೋಂಕಿತರ ಸಂಖ್ಯೆ, ಆಸ್ಪತ್ರೆ ಸಮಸ್ಯೆ, ಬೆಡ್ ಸಮಸ್ಯೆ ಸೇರಿದಂತೆ ಕೊರೊನಾ ತಡೆಗೆ ಅಗತ್ಯವಿರುವ ಕ್ರಮಗಳನ್ನು ಸಚಿವರು ನಿರ್ವಹಿಸಬೇಕಿದೆ. ಈಗಾಗಲೇ ಕೊರೊನಾ ಜವಾಬ್ದಾರಿ ವಹಿಸಿಕೊಂಡಿರುವ ಸಚಿವರಾದ ಶ್ರೀರಾಮುಲು ಮತ್ತು ಡಾ.ಕೆ ಸುಧಾಕರ್ ಅವರು ಮೇಲ್ವಿಚಾರಣೆಯನ್ನು ಮಾಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸಿಎಂ ಕಾರ್ಯದರ್ಶಿ ಆಗಿರುವ ಎಸ್.ಆರ್.ವಿಶ್ವನಾಥ್ ಅವರಿಗೂ ವಲಯದ ಉಸ್ತುವಾರಿ ನೀಡಲಾಗುತ್ತದೆ ಎನ್ನಲಾಗಿದೆ.

BNG

ಪ್ರತಿದಿನ ವಲಯದ ಉಸ್ತುವಾರಿಗಳು ಕೊರೊನಾ ಕುರಿತ ಮಾಹಿತಿಯನ್ನು ಸಿಎಂ ಅವರಿಗೆ ಸಲ್ಲಿಕೆ ಮಾಡಬೇಕಿದೆ. ಅಷ್ಟವಲಯ ತಂಡದಲ್ಲಿ ಕೊರೊನಾ ಕಂಟ್ರೋಲ್‍ಗೆ ಮೈಕ್ರೋ ಲೆವಲ್ ಸೆಟ್ ಅಪ್ ಮಾಡಲಾಗುತ್ತಿದೆ. ಈ ತಂಡ ನಾಲ್ಕು ಹಂತದಲ್ಲಿ ಕಾರ್ಯಾಚರಣೆ ನಡೆಸಲಿದೆ. ಸಚಿವರು, ಶಾಸಕರು, ಪಾಲಿಕೆ ಸದಸ್ಯ, ವಾರ್ಡ್ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಸದ್ಯದಲ್ಲಿ ಸಿಎಂ ಅವರ ನಿರ್ಧಾರ ಪ್ರಮುಖವಾಗಿದ್ದು, ಸರ್ಕಾರ ಈ ಅಷ್ಟ ಉಸ್ತುವಾರಿಗಳ ಚಿಂತನೆ ಯಶಸ್ವಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ವಲಯ ಉಸ್ತುವಾರಿಗಳು ಯಾರು? ಎಲ್ಲಿಗೆ? (ಸಂಭವನೀಯ ಪಟ್ಟಿ)
ಬೆಂಗಳೂರಿನಲ್ಲಿ ಒಟ್ಟು ಎಂಟು ವಲಯಗಳು:
ಬಿಬಿಎಂಪಿ ಪೂರ್ವ ವಲಯ – 44 ವಾರ್ಡ್ – ಡಾ.ಅಶ್ವಥ್ ನಾರಾಯಣ್
ಬಿಬಿಎಂಪಿ ಪಶ್ಚಿಮ ವಲಯ- 44 ವಾರ್ಡ್ – ಸೋಮಣ್ಣ
ಬಿಬಿಎಂಪಿ ದಕ್ಷಿಣ ವಲಯ – 44 ವಾರ್ಡ್ – ಅಶೋಕ್
ಬಿಬಿಎಂಪಿ ಮಹಾದೇವ ಪುರ ವಲಯ – 17 – ಬೈರತಿ ಬಸವರಾಜು
ಬಿಬಿಎಂಪಿ ಯಲಹಂಕ- 11ವಾರ್ಡ್ – ಎಸ್.ಆರ್.ವಿಶ್ವನಾಥ್
ಬಿಬಿಎಂಪಿ ಆರ್ ಆರ್ ನಗರ ವಲಯ- 14 – ಎಸ್.ಟಿ.ಸೋಮಶೇಖರ್
ಬಿಬಿಎಂಪಿ ದಾಸರಹಳ್ಳಿ ವಲಯ- 08 ವಾರ್ಡ್ – ಗೋಪಾಲಯ್ಯ
ಬಿಬಿಎಂಪಿ ಬೊಮ್ಮನಹಳ್ಳಿ ವಲಯ- 16 – ಸುರೇಶ್ ಕುಮಾರ್

Share This Article
Leave a Comment

Leave a Reply

Your email address will not be published. Required fields are marked *