ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಇನ್ನೂ ಮೂರು ದಿನ ಬಾಕಿಯಿದೆ. ಆದರೆ ಪ್ರತಿ ವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್‍ಬಾಗ್‍ನಲ್ಲಿ ನಡೆಯುತ್ತಿದ್ದ ಫಲಪುಷ್ಪ ಪ್ರದರ್ಶನ ಈ ಬಾರಿ ರದ್ದಾಗಿದೆ.
ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾದ ಫಲಪುಷ್ಪ ರದ್ದತಿ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಕುಸುಮಾ, ಕೊರೊನಾ ಭೀತಿ ಹಿನ್ನೆಲೆ ಫ್ಲವರ್ ಶೋವನ್ನು ಕೈ ಬಿಟ್ಟಿದ್ದೇವೆ. ಪ್ರತಿವರ್ಷ ಐದು ಲಕ್ಷಕ್ಕೂ ಹೆಚ್ಚು ಮಂದಿ ಫ್ಲವರ್ ಶೋ ವೀಕ್ಷಣೆ ಮಾಡುತ್ತಿದ್ದರು ಎಂದು ಹೇಳಿದರು.
ಒಂದು ಪ್ರದರ್ಶನಕ್ಕೆ ಎರಡು ಕೋಟಿಗೂ ಅಧಿಕ ವೆಚ್ಚ ತಗುಲುತ್ತಿತ್ತು. ಫ್ಲವರ್ ಶೋ ವೇಳೆ ಹೆಚ್ಚು ಜನ ಉದ್ಯಾನವನಕ್ಕೆ ಬರುತ್ತಾರೆ. ಈ ವೇಳೆ ಕ್ರೌಡ್ ಕಂಟ್ರೋಲ್ ಮಾಡುವುದು ಅಸಾಧ್ಯ. 1912 ರಿಂದ ಆರಂಭವಾದ ಪ್ಲವರ್ ಶೋ ಸುಮಾರು 109 ವರ್ಷಗಳ ಕಾಲ ಸತತವಾಗಿ ಆಚರಿಸಿಕೊಂಡು ಬಂದಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಈ ವರ್ಷ ಆಯೋಜನೆ ಮಾಡುವ ಲೆಕ್ಕಾಚಾರ ಇಟ್ಟುಕೊಂಡಿತ್ತು. ಈ ಬಗ್ಗೆ ಬಿಬಿಎಂಪಿಗೆ ತೋಟಗಾರಿಕೆ ಇಲಾಖೆ ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಫಲಪುಷ್ಪ ಪ್ರದರ್ಶನ ಆಯೋಜಿಸುವುದಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಈ ವರ್ಷದ ಫ್ಲವರ್ ಶೋವನ್ನು ತೋಟಗಾರಿಕೆ ಇಲಾಖೆ ಕೈ ಬಿಟ್ಟಿದೆ ಎಂದರು.
ಕೋವಿಡ್ 19 ನಿಂದಾಗಿ ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಬೇಕಿದ್ದ ಫ್ಲವರ್ ಶೋ ರದ್ದಾಗಿತ್ತು. ಈಗ ಮತ್ತೊಮ್ಮೆ ಕೊರೊನಾ ಕಾರಣದಿಂದಾಗಿ ಫ್ಲವರ್ ಶೋ ರದ್ದಾಗಿದೆ.