ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅವರು ಬೆಂಗಳೂರಿಗೆ ಬಂದು ಸಿಲಿಕಾನ್ ಸಿಟಿಯಲ್ಲಿ ನೆಲೆಸಿರುವ ತನ್ನ ಅಣ್ಣನ ಆಶೀರ್ವಾದ ಪಡೆದುಕೊಂಡಿದ್ದಾರೆ.
ಸೌತ್ ಇಂಡಿಯನ್ ಸೂಪರ್ ಸ್ಟಾರ್ ರಜಿನಿಕಾಂತ್ ಅವರು, ಇದೇ ಡಿಸೆಂಬರ್ 31ಕ್ಕೆ ತಮ್ಮ ಹೊಸ ಪಕ್ಷವನ್ನು ಲಾಂಚ್ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಬೆಂಗಳೂರಿಗೆ ಬಂದಿರುವ ರಜನಿಕಾಂತ್ ಅವರು, ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಸೋದರ ಸತ್ಯನಾರಾಯಣ್ ರಾವ್ ಅವರನ್ನು ಭೇಟಿ ಮಾಡಿ ರಾಜಕೀಯ ಪಕ್ಷ ಘೋಷಣೆ ಮಾಡುವ ಮುನ್ನ ಅಣ್ಣನ ಜೊತೆ ಮಾತನಾಡಿದ್ದಾರೆ.
ಹೊಸ ಪಕ್ಷ ಲಾಂಚ್ ಮಾಡುವ ಬಗ್ಗೆ ಕಳೆದ ವಾರ ಟ್ವೀಟ್ ಮಾಡಿದ್ದ ತಲೈವಾ, ಜನವರಿಯಲ್ಲಿ ರಾಜಕೀಯ ಪಕ್ಷವನ್ನು ಲಾಂಚ್ ಮಾಡಲಿದ್ದೇನೆ. ಈ ಕುರಿತು ಡಿಸೆಂಬರ್ 31ರಂದು ಪ್ರಮುಖ ಘೋಷಣೆ ಮಾಡಲಿದ್ದೇನೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದರು. ಡಿಸೆಂಬರ್ 31ರಂದು ರಜನಿಕಾಂತ್ ಮಾಡಲಿರುವ ಅನೌನ್ಸ್ ಮೆಂಟ್ ಏನು ಎಂಬುದು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ஜனவரியில் கட்சித் துவக்கம்,
டிசம்பர் 31ல் தேதி அறிவிப்பு. #மாத்துவோம்_எல்லாத்தையும்_மாத்துவோம்#இப்போ_இல்லேன்னா_எப்பவும்_இல்ல ???????? pic.twitter.com/9tqdnIJEml
— Rajinikanth (@rajinikanth) December 3, 2020
ಕಳೆದ ಸೋಮವಾರವಷ್ಟೇ ರಜನಿಕಾಂತ್ ಅವರು ಆರ್.ಎಂ.ಎಂ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಭೆ ಕರೆದಿದ್ದರು. ಜನರೊಂದಿಗೆ ಮಾತನಾಡಿ ಹೆಚ್ಚಿನ ಮಾಹಿತಿ ತಿಳಿಸಲಿದ್ದೇನೆ ಎಂದು ಈ ಹಿಂದೆ ಹೇಳಿದ್ದರು. ರಾಜಕೀಯ ಪ್ರವೇಶಿಸುವ ಕುರಿತು ರಜನಿಕಾಂತ್ ಡಿಸೆಂಬರ್ 31, 2017ರಲ್ಲೇ ಘೋಷಣೆ ಮಾಡಿದ್ದರು. ಇದೀಗ ತಮ್ಮ ರಾಜಕೀಯ ಪಕ್ಷದ ಕುರಿತು ರಜನಿಕಾಂತ್ ಅಪ್‍ಡೇಟ್ ನೀಡಿದ್ದಾರೆ. ಅಲ್ಲದೆ ಮುಂಬರುವ ತಮಿಳುನಾಡು ವಿಧಾನ ಸಭಾ ಚುನಾವಣೆಗೆ ಈ ಮೂಲಕ ತಯಾರಿಯನ್ನು ಸಹ ಮಾಡಿಕೊಳ್ಳುತ್ತಿದ್ದಾರೆ.
ತಮ್ಮದೇ ಸ್ವಂತ ಪಕ್ಷ ಕಟ್ಟಿ ರಾಜಕೀಯದಲ್ಲಿ ಬದಲಾವಣೆ ತರುವುದಾಗಿ ರಜನಿ ತಿಳಿಸಿದ್ದರು. ಆದರೆ ನಂತರ ಈ ಬಗ್ಗೆ ಹೆಚ್ಚು ಅಪ್‍ಡೇಟ್ ಸಿಕ್ಕಿರಲಿಲ್ಲ. ಲೋಕಸಭಾ ಚುನಾವಣೆ ವೇಳೆ ಸಹ ರಾಜಕೀಯದ ಕುರಿತು ತಮ್ಮ ನಿರ್ಧಾರ ಘೋಷಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ರಜನಿಕಾಂತ್ ಇನ್ನೂ ಸಮಯ ಬೇಕು ಎಂದಿದ್ದರು. ಇದೆಲ್ಲದರ ಮಧ್ಯೆ ಬಿಜೆಪಿ ಸೇರಲಿದ್ದಾರೆ ಎಂಬ ಅಂಶ ಸಹ ಚರ್ಚೆಗೆ ಬಂದಿತ್ತು. ಆದರೆ ರಾಜಕೀಯಕ್ಕೆ ಆಗಮಿಸುವ ಕುರಿತು ಘೋಷಣೆ ಮಾಡಿ ಮೂರು ವರ್ಷದ ಕಳೆದರೂ ಯಾವುದೇ ಬೆಳವಣಿಗೆ ಕಂಡುಬಂದಿರಲಿಲ್ಲ. ಹೀಗಾಗಿ ರಜನಿ ರಾಜಕೀಯದಿಂದ ಹಿಂದೆ ಸರಿಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಿತ್ತು.