– ಶಿವಮೊಗ್ಗ, ಹಾಸನ, ಚಿಕ್ಕಮಗಳೂರಿನಲ್ಲಿ ಯೆಲ್ಲೋ ಅಲರ್ಟ್
ಬೆಂಗಳೂರು: ದೇಶದ ಕೆಲ ರಾಜ್ಯಗಳಿಗೆ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆಯಂತೆ ಇಂದು ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಪರಿಣಾಮ ಬೆಂಗಳೂರಿನಲ್ಲೂ ಇಂದು ಮಧ್ಯಾಹ್ನದಿಂದ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ ಎರಡು ಗಂಟೆ ನಂತರ ಅಲ್ಲಲ್ಲಿ ಮಳೆಯಾಗಿದೆ.
ಇಂದು ಬೆಳಗ್ಗೆ ಚೆನ್ನೈನ ಕೊಯಂಬೇಡು,ಅಣ್ಣಾ ನಗರ್, ಕೆ.ಕೆ ನಗರ್, ಸಾಲಿಗ್ರಾಮ ಮತ್ತು ವಿರುಗಂಬಕ್ಕಂ ಪ್ರದೇಶಗಳಲ್ಲಿ ಮಳೆ ಸುರಿದಿದೆ. ಬೆಂಗಳೂರಿನಲ್ಲಿ ವಿಧಾನಸೌಧ, ರಾಜಭವನ ಸುತ್ತಮುತ್ತ, ಯಶವಂತಪುರ, ರಾಜಭವನ ,ಮೇಕ್ರಿ ಸರ್ಕಲ್, ಕಬ್ಬನ್ ಪಾರ್ಕ್, ಮಲ್ಲೇಶ್ವರಂ ಸುತ್ತ ಮುತ್ತ ವರುಣಧಾರೆಯಾಗಿದೆ.
ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಚೆನ್ನೈನಲ್ಲಿ ಇಂದು ಸಂಜೆ ಕೂಡ ಮಳೆಯಾಗುವ ಸಾಧ್ಯತೆ ಇದೆ. ಹಾಗೆ ಪಕ್ಕದ ರಾಜ್ಯಗಳಾದ ಕರ್ನಾಟಕ, ಕೇರಳ, ತೆಲಂಗಾಣದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇಂದು ಮತ್ತೆ ನಾಳೆ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಂಗಳೂರಿನಲ್ಲಿ ಈಗಾಗಲೇ ಮೋಡ ಕವಿದ ವಾತಾವರಣವಿದ್ದುನಗರದೆಲ್ಲೆಡೆ ಕೂಲ್ ವೆದರ್ ಸೃಷ್ಟಿಯಾಗಿದೆ. ಈಗಾಗಲೇ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಈ ಮೂರು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಬಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಾಯುಭಾರದಲ್ಲಿ ವ್ಯತ್ಯಾಸ ಹಿನ್ನಲೆಯಲ್ಲಿ ಕರ್ನಾಟಕ,ಆಂಧ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆ ಬರಲಿದೆ ಎಂದು ಹವಮಾನ ಇಲಾಖೆಯ ರಾಜ್ಯ ನಿರ್ದೇಶಕ ಸಿ.ಎಸ್ .ಪಾಟೀಲ್ ತಿಳಿಸಿದ್ದಾರೆ.