– ಪೊಲೀಸರ ಸಹಾಯದಿಂದ ಟ್ರೇಸ್‍ಗೆ ಮುಂದಾದ ಅಧಿಕಾರಿಗಳು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತಾಂಡವಾಡುತ್ತಿದ್ದು, ಆಕ್ಸಿಜನಗಾಗಿ ಜನ ಪರದಾಡುತ್ತಿದ್ದಾರೆ. ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದ್ದು, ರಾಜಧಾನಿಯಿಂದ ಬರೋಬ್ಬರಿ 2 ಸಾವಿರದಿಂದ 3 ಸಾವಿರ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ.
ಈ ಕುರಿತು ಸ್ವತಃ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದು, ಸುಮಾರು 2,000- 3,000 ಸೋಂಕಿತರು ನಾಪತ್ತೆಯಾಗಿದ್ದು, ಮನೆಗಳನ್ನು ತೊರೆದಿದ್ದಾರೆ. ಅಲ್ಲದೆ ಮೊಬೈಲ್‍ಗಳನ್ನು ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಪೊಲೀಸರ ಸಹಾಯದಿಂದ ಅಧಿಕಾರಿಗಳು ಇಂತಹವರನ್ನು ಟ್ರೇಸ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸುಮಾರು 2,000- 3,000 ಸೋಂಕಿತರು ಮನೆಗಳನ್ನು ತೊರೆದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಸೋಂಕಿತರು ದಯವಿಟ್ಟು ಮೊಬೈಲ್ ಆಫ್ ಮಾಡಿಕೊಳ್ಳಬೇಡಿ, ಮನೆಗಳನ್ನು ತೊರೆಯಬೇಡಿ. ಸೋಂಕು ಪತ್ತೆಯಾದ ಆರಂಭದಲ್ಲಿ ಹೀಗೆ ನಾಪತ್ತೆಯಾದರೆ, ಐಸಿಯುಗೆ ಹೋಗುವ ಸ್ಥಿತಿ ಬರುತ್ತದೆ. ಆಗ ಮೊಬೈಲ್ ಆನ್ ಮಾಡಿಕೊಳ್ಳುತ್ತೀರಿ, ಅಷ್ಟೊತ್ತಿಗಾಗಲೇ ಪರಿಸ್ಥಿತಿ ಕೈ ಮೀರಿರುತ್ತದೆ. ಇದ್ದಕ್ಕಿದ್ದಂತೆ ಆಗಮಿಸಿ ಬೆಡ್ ಬೇಕು ಎಂದು ಕೇಳಿದಾಗ ಸಮಸ್ಯೆಯಾಗುತ್ತದೆ. ಹೀಗಾಗಿ ದಯವಿಟ್ಟು ಈ ರೀತಿ ಮಾಡಬೇಡಿ, ನಿಮ್ಮನ್ನು ಟ್ರ್ಯಾಕ್ ಮಾಡಲಿಕ್ಕೇ 10 ದಿನ ಬೇಕಾಗುತ್ತದೆ ಎಂದರು.
ಕಡ್ಡಾಯವಾಗಿ ನಿಯಮ ಪಾಲಿಸಿದಲ್ಲಿ ಶೇ.90ಕ್ಕೂ ಹೆಚ್ಚು ಜನ ಗುಣಮುಖರಾಗುತ್ತಾರೆ. ಹೋಮ್ ಐಸೋಲೇಶನ್‍ನಲ್ಲಿರುವವರಿಗೂ ಸರ್ಕಾರ ಉಚಿತ ಔಷಧಿಗಳನ್ನು ನೀಡುತ್ತಿದೆ. ಆದರೆ ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಪರಿಸ್ಥಿತಿ ಗಂಭೀರವಾದ ಬಳಿಕ ಐಸಿಯು ಬೇಕು ಎಂದರೆ ಕಷ್ಟವಾಗುತ್ತದೆ. ಈಗಾಗಲೇ ಸುಮಾರು 2,000- 3,000 ಜನ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಾವು ವಿಳಾಸ ನೀಡಿದ್ದ ಮನೆಗಳನ್ನು ಸಹ ತೊರೆದಿದ್ದಾರೆ. ಅಂತಹವರನ್ನು ಪೊಲೀಸರು ಟ್ರೇಸ್ ಮಾಡುತ್ತಿದ್ದು, ಹೋರಾಟ ನಡೆಸುತ್ತಿದ್ದಾರೆ. ದಯವಿಟ್ಟು ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ದಿನದ ಕೊರೊನಾ ಪ್ರಕರಣಗಳ ಸಂಖ್ಯೆ 40 ಸಾವಿರದ ಗಡಿ ತಲುಪಿದ್ದು, ಇದರಲ್ಲಿ 29 ಸಾವಿರ ಬೆಂಗಳೂರಿನಲ್ಲೇ ಪತ್ತೆಯಾಗಿವೆ. 229 ಜನ ಒಂದೇ ದಿನ ಸಾವನ್ನಪ್ಪಿದ್ದಾರೆ.