ಬೆಂಗಳೂರಲ್ಲಿ ಕೊರೊನಾ ನಿಯಂತ್ರಣಕ್ಕೆ 15 ದಿನ ಬೇಕು: ಮೋದಿ ಸಭೆಯಲ್ಲಿ ಬಿಬಿಎಂಪಿ ಆಯುಕ್ತರ ಹೇಳಿಕೆ

Public TV
2 Min Read
BSY 9

– ಬೆಂಗಳೂರು ನಗರದಲ್ಲಿ ಲಾಕ್‍ಡೌನ್ ವಿಸ್ತರಣೆ ಪಕ್ಕಾ, ಸಿಎಂ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲಾಕ್‍ಡೌನ್ ಮತ್ತಷ್ಟು ವಿಸ್ತರಣೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆದ ಸಂವಾದದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ನೀಡಿರುವ ಇನ್ನೂ 15 ದಿನ ನಮಗೆ ಅವಶ್ಯಕತೆ ಎಂದಿರುವುದು ಲಾಕ್‍ಡೌನ್ ವಿಸ್ತರಣೆಯನ್ನು ಖಚಿತಪಡಿಸುತ್ತಿದೆ.

bbmp commissioner gaurav gupta

ಬೆಂಗಳೂರು ನಗರದಲ್ಲಿ ಶೇ.40 ರಷ್ಟು ಕೇಸ್ ಇಳಿದಿದೆ. ಆದ್ರೆ ಇನ್ನು 15 ದಿನದೊಳಗಾಗಿ ಕಂಟ್ರೋಲ್‍ಗೆ ಬರಬಹುದು. ಬೆಂಗಳೂರಿನ ಪಾಸಿಟಿವಿಟಿ ರೇಟ್ ಕೂಡ ಅಲ್ಪ ಇಳಿಕೆ ಕಾಣ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪಿಎಂ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮಾಹಿತಿ ನೀಡಿದರು. ಬೆಂಗಳೂರಲ್ಲಿ ಹಲವು ನಿಯಂತ್ರಣ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಈಗಾಗಲೇ ಮೇ 24ರ ತನಕ ಲಾಕ್‍ಡೌನ್ ಇದೆ. ಮುಂದೆ ವಿಸ್ತರಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ನಿರ್ಧಾರ ಮಾಡ್ತಾರೆ ಎಂದು ಮಾಹಿತಿ ನೀಡಿದರು.

d75a30b5 dfeb 43b3 a5e3 f3e8aa08b3b1 1

ಚಿಕಿತ್ಸಾ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದೇವೆ. ಅಂಬುಲೆನ್ಸ್ ಸಮಸ್ಯೆ, ಆಕ್ಸಿಜನ್ ಸಮಸ್ಯೆ ಕಡಿಮೆಯಾಗಿದೆ. ವಿಧಾನಸಭಾ ಕ್ಷೇತ್ರವಾರು ಕೋವಿಡ್ ಕೇರ್ ಕೇಂದ್ರಗಳನ್ನ ತೆರೆಯಲಾಗಿದೆ, ಉಳಿದೆಡೆಗಳಲ್ಲಿ ಶೀಘ್ರ ತೆರೆಯುತ್ತೇವೆ. ಹೋಂ ಐಸೋಲೇಶನ್ ಬಗ್ಗೆ ಹೆಚ್ಚು ನಿಗಾ ವಹಿಸಲಾಗಿದೆ. ಸಾವಿನ ಪ್ರಮಾಣವನ್ನ ಇಳಿಕೆ ಮಾಡಲು ಅಗತ್ಯ ಕ್ರಮಕೈಗೊಂಡಿದ್ದೇವೆ. ಬಿಗಿಯಾದ ಕ್ರಮಗಳನ್ನು ಇನ್ನಷ್ಟು ಕಾರ್ಯರೂಪಕ್ಕೆ ತರುತ್ತೇವೆ. ನಮಗೆ ಇನ್ನು 15 ದಿನಗಳ ಕಾಲ ಅವಶ್ಯಕತೆ ಇದೆ ಎಂದು ಪ್ರಧಾನಿ ಮೋದಿಗೆ ಮನವರಿಕೆ ಮಾಡಿದರು.

MODI 1

ವಲಯವಾರು ವಾರ್ ರೂಂ ಆರಂಭಿಸಲಾಗಿದೆ. ಟೆಸ್ಟಿಂಗ್ ಹೆಚ್ಚಳ ಮಾಡಿದ್ದೇವೆ. ವ್ಯಾಕ್ಸಿನ್ ಪ್ರಮಾಣದಲ್ಲಿ ಬೆಂಗಳೂರೇ ನಂಬರ್ 1 ಎನ್ನುವ ಬಗ್ಗೆಯೂ ಮಾಹಿತಿ ನೀಡಿ, ಬೆಂಗಳೂರಿಗೆ ಇನ್ನಷ್ಟು ವ್ಯಾಕ್ಸಿನ್ ಪೂರೈಕೆ ಮಾಡಬೇಕೆಂದು ಮನವಿ ಮಾಡಿದರು. ಕೊರೊನಾ ಹಬ್ ಆಗಿದ್ದ ಕೆ.ಆರ್. ಮಾರ್ಕೆಟ್ ವಿಕೇಂದ್ರೀಕರಣ, ಬಡ ಕಾರ್ಮಿಕರಿಗೆ ಉಚಿತ ಆಹಾರ ನೀಡುತ್ತಿರುವ ಬಗ್ಗೆಯೂ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಿಂತ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರೇ ಹೆಚ್ಚು ವಿವರಣೆ ನೀಡಿದ್ದು ವಿಶೇಷವಾಗಿತ್ತು.

ವೀಡಿಯೋ ಕಾನ್ಫರೆನ್ಸ್‍ನಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್, ವಿಶೇಷ ಆಯುಕ್ತ ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ, ಗೃಹಕಚೇರಿ ಕೃಷ್ಣಾದಿಂದ ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವಥನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ಕೆ.ಸುಧಾಕರ್, ಜಗದೀಶ್ ಶೆಟ್ಟರ್, ಮುಖ್ಯಕಾರ್ಯದರ್ಶಿ ರವಿಕುಮಾರ್ ಹಾಗೂ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು.

Share This Article