ಹಾವೇರಿ: ಹಾನಗಲ್ ಶಾಸಕ ಹಾಗೂ ಮಾಜಿ ಸಚಿವ ಸಿ.ಎಂ.ಉದಾಸಿ(85) ಅನಾರೋಗ್ಯದ ಹಿನ್ನೆಲೆ ಇಂದು ವಿಧಿವಶರಾಗಿದ್ದು, ಪತಿ ಸಾವಿನ ವಿಚಾರ ತಿಳಿಯುತ್ತಿದ್ದಂತೆಯೇ ಅವರ ಪತ್ನಿ ನೀಲಮ್ಮ ಗಳಗಳನೇ ಕಣ್ಣೀರು ಹಾಕಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಸಿ.ಎಂ.ಉದಾಸಿಯವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಾಧ್ಯಾಹ್ನ 2 ಗಂಟೆ 48 ನಿಮಿಷಕ್ಕೆ ನಿಧನರಾಗಿದ್ದಾರೆ. ಪತಿ ನಿಧನದ ಸುದ್ದಿ ತಿಳಿದು ಹಾನಗಲ್ ಪಟ್ಟಣದ ಗೌಳಿ ಗಲ್ಲಿಯ ಮನೆಯಲ್ಲಿರುವ ಪತ್ನಿ ನೀಲಮ್ಮ ಕಣ್ಣೀರು ಸುರಿಸಿದ್ದಾರೆ. ಸದ್ಯ ಉದಾಸಿ ನಿವಾಸದಲ್ಲಿ ನೀರವ ಮೌನ ಆವರಿಸಿದ್ದು, ಉದಾಸಿ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರು, ಸಂಬಂಧಿಕರು ಹಾಗೂ ಅಭಿಮಾನಿಗಳು ಆಗಮಿಸಿ ಪತ್ನಿ ನೀಲಮ್ಮ ಅವರಿಗೆ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಇದನ್ನು ಓದಿ:ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನ
ನಾಳೆ ಬೆಳಗ್ಗೆ ಸಿ.ಎಂ.ಉದಾಸಿಯ ಪಾರ್ಥೀವ ಶರೀರ 12 ಗಂಟೆಗೆ ಹಾನಗಲ್ ಪಟ್ಟಣಕ್ಕೆ ಆಗಮಿಸಲಿದ್ದು, ವಿರಕ್ತಮಠದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮಧ್ಯಾಹ್ನ ಒಂದು ಗಂಟೆಗೆ ಪಟ್ಟಣದ ಗೌಳಿ ಗಲ್ಲಿಯಲ್ಲಿರುವ ನಿವಾಸದಲ್ಲಿ ಪಾರ್ಥೀವ ಶರೀರಕ್ಕೆ ಪೂಜೆಯನ್ನು ಕುಟುಂಬಸ್ಥರು ನೆರವೇರಿಸಲಿದ್ದಾರೆ. ಒಂದು ಗಂಟೆ ನಂತರ ಪಟ್ಟಣದ ವಿರಕ್ತಮಠದ ಆವರಣದಲ್ಲಿ ಪಾರ್ಥೀವ ಶರೀರ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಸಂಜೆ ನಾಲ್ಕು ಗಂಟೆಗೆ ಲಿಂಗಾಯತ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಅಂತ್ಯಕ್ರಿಯೆ ನಡೆಯುವ ಪಟ್ಟಣದ ವಿರಕ್ತಮಠದ ರುದ್ರಭೂಮಿಯ ಸ್ಥಳವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ ಮಿಶ್ರಾ, ಹೆಚ್ಚುವರಿ ಎಸ್ಪಿ ವಿಜಯಕುಮಾರ್, ಎಸಿ ಅನ್ನಪೂರ್ಣ ಮುದಕಮ್ಮನವರು ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಇದನ್ನು ಓದಿ:ಸಿಎಂ ಉದಾಸಿ ನಿಧನಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂತಾಪ