ಕೋಲಾರ: ಜಿಲ್ಲಾಧಿಕಾರಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಅಂದಿನ ಸಿಇಒ, ಡಿಸಿಯಾಗಿರುವ ಅಧಿಕಾರಿಗೆ ಬೆಳ್ಳಿಗದೆ, ಕಿರೀಟ ನೀಡಿ ಅದ್ಧೂರಿಯಾಗಿ ಅಭಿನಂದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಸಿಬಿಗೆ ಆದೇಶ ನೀಡಿದೆ.
ಅದ್ಧೂರಿ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿದ್ದ ಇಬ್ಬರು ಡಿಸಿಗಳು ಸೇರಿದಂತೆ 9 ಪಿಡಿಒಗಳ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಈ ಕುರಿತಂತೆ ತನಿಖೆ ನಡೆಸಲು ಸದ್ಯ ನ್ಯಾಯಾಲಯ ಆದೇಶ ನೀಡಿದೆ.
Advertisement
Advertisement
ಏನಿದು ಪ್ರಕರಣ?
ಕೋಲಾರ ಜಿಲ್ಲಾಪಂಚಾಯತಿ ಸಿಇಒ ಆಗಿದ್ದ, ಸದ್ಯ ಉಡುಪಿ ಜಿಲ್ಲಾಧಿಕಾರಿಗಳಿರುವ ಜಗದೀಶ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಬೆಳ್ಳಿಗದೆ, ಕಿರೀಟ ಹಾಗೂ ಚಿನ್ನದ ಉಂಗುರ ನೀಡಿ ಜಿಲ್ಲಾ ಪಿಡಿಒಗಳು ಅದ್ಧೂರಿಯಾಗಿ ಬೀಳ್ಕೊಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸಿ ಜಗದೀಶ್ ಸೇರಿದಂತೆ ತಾಪಂ ಇಒ ಮತ್ತು 9 ಮಂದಿ ಗ್ರಾಪಂ ಪಿಡಿಒಗಳ ಮೇಲೆ ಎಫ್‍ಐಆರ್ ದಾಖಲಾಗಿದೆ. 2019ರ ಆಗಸ್ಟ್ 23 ರಂದು ಕೋಲಾರ ಜಿಪಂ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
Advertisement
ಘಟನೆ ಸಂಬಂಧಪಟ್ಟಂತೆ ಕೋಲಾರದ ಎಸ್.ನಾರಾಯಣಸ್ವಾಮಿ ಭ್ರಷ್ಟಾಚಾರ ನಿಗ್ರಹದಳದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು. ಅಕ್ರಮ ಸಂಭಾವನೆಗಳಿಸಿ ದುಬಾರಿ ಗಿಫ್ಟ್ ಕೊಡುವ ಮೂಲಕ ನಿರ್ಗಮಿತ ಅಧಿಕಾರಿಗೆ ಬೀಳ್ಕೊಡುಗೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು.
Advertisement
ಘಟನೆ ಸಂಬಂಧಿಸಿದಂತೆ ಆರೋಪ ಕೇಳಿ ಬಂದ ಸಂದರ್ಭದಲ್ಲಿ ಪಿಡಿಒ ಸಂಘದಿಂದ ಸ್ಪಷ್ಟನೆ ನೀಡಲಾಗಿತ್ತು. ನಿರ್ಗಮಿತ ಸಿಇಒ ಅವರಿಗೆ ಬಾಡಿಗೆ ಬೆಳ್ಳಿಗದೆ, ಕಿರೀಟ ತಂದು ಸನ್ಮಾನ ಮಾಡಿದ್ದಾಗಿ ಪಿಡಿಒ ಸಂಘ ವಿವರಣೆ ನೀಡಿತ್ತು. ಆದರೆ 2020ರ ಜೂನ್ 17ರಂದು ಘಟನೆ ಕುರಿತಂತೆ ತನಿಖೆ ನಡೆಸಲು ಕೋಲಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಳ್ಳಲಾಗಿತ್ತು. ಅರ್ಜಿ ಸ್ವೀಕರಿಸಿದ ನ್ಯಾಯಾಲಯ ಘಟನೆ ಕುರಿತು ತನಿಖೆ ನಡೆಸಿ 2020 ಆಗಸ್ಟ್ 25ರ ವೇಳೆಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನ್ಯಾಯಾಧೀಶರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶ ನೀಡಿದ್ದಾರೆ. ಇದೀಗ ಪ್ರಕರಣ ಸಂಬಂಧ ನ್ಯಾಯಾಲಯದ ತನಿಖೆ ನಡೆಸುವಂತೆ ಆದೇಶ ನೀಡಿರುವುದು ಕುತೂಹಲ ಮೂಡಿಸಿದೆ.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ 2020 ಜೂನ್ 25 ರಂದು ನಿರ್ಗಮಿತ ಜಿಲ್ಲಾಪಂಚಾಯತ್ ಸಿಇಒ ಜಗದೀಶ್, ಪಿಡಿಒಗಳಾದ ಕೆ.ಮಹೇಶ್‍ಕುಮಾರ್, ಪಿ.ನಾರಾಯಣಪ್ಪ, ಎಂ.ರಾಮಕೃಷ್ಣ, ವಿ.ಶಂಕರ್, ಎನ್.ಸಂಪರಾಜ್, ಎಸ್.ಜಿ.ಹರೀಶ್ ಕುಮಾರ್, ಎಂ.ಸೋಮಶೇಖರ್, ಅಶ್ವತ್ಥ ನಾರಾಯಣ, ಎಂ.ಸುರೇಶ್‍ಕುಮಾರ್ ಹಾಗೂ ಶ್ರೀನಿವಾಸಪುರ ತಾಪಂ ಇಒ ಎಸ್.ಆನಂದ್ ವಿರುದ್ಧ ಎಸಿಬಿಯು ಐಪಿಸಿ ಕಲಂ 465, 467, 468, 471ರ ಅನ್ವಯ ಎಫ್‍ಐಆರ್ ದಾಖಲಿಸಿಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಡಿವೈಎಸ್ಪಿ ಎಂ.ಎಲ್.ಪುರುಷೋತ್ತಮ್ ಮತ್ತು ಪೊಲೀಸ್ ನಿರೀಕ್ಷಕ ಜಿ.ಎನ್.ವೆಂಕಟಾಚಲಪತಿ ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಭಾಗವಹಿಸಿದ್ದ ನಿರ್ಗಮಿತ ಜಿಲ್ಲಾಧಿಕಾರಿ ಜಿ.ಮಂಜುನಾಥ್ ಸೇರಿದಂತೆ ಒಟ್ಟು ಆರು ಮಂದಿ ಅಧಿಕಾರಿಗಳನ್ನು ಸಾಕ್ಷಿಗಳನ್ನಾಗಿ ಗುರುತಿಸಲಾಗಿದೆ.
ಸನ್ಮಾನ ಸ್ವೀಕರಿಸಿದ ಒಬ್ಬ ಜಿಲ್ಲಾಧಿಕಾರಿಗೆ ಸಂಕಷ್ಟ ಎದುರಾಗಿದ್ದರೆ, ಇತ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮತ್ತೊಬ್ಬ ಜಿಲ್ಲಾಧಿಕಾರಿಯನ್ನೇ ಪ್ರಕರಣದಲ್ಲಿ ಸಾಕ್ಷಿಯಾಗಿ ಮಾಡಿರುವುದು ಇಬ್ಬರು ಜಿಲ್ಲಾಧಿಕಾರಿಗಳಿಗೆ ಮುಜುಗರ ಉಂಟಾಗಿದೆ. ಅಲ್ಲದೇ ಜಿಲ್ಲೆಯ ಪಿಡಿಒಗಳಿಗೂ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.