ಧಾರವಾಡ: ಕಳ್ಳರು ತಪ್ಪಿಸಿಕೊಂಡು ಹೋಗುವಾಗ ಪೊಲೀಸರು ಅವರನ್ನು ಹೊಡೆಯುವುದು ಸಾಮಾನ್ಯ. ಆದರೆ ತಮ್ಮನ್ನು ಅರೆಸ್ಟ್ ಮಾಡಲು ಬಂದ ಪೊಲೀಸರ ಮೇಲೆ ಹಾಡಹಗಲೇ ನಡುಬೀದಿಯಲ್ಲೇ ಇರಾನಿ ಗ್ಯಾಂಗ್‌ನ ಕಳ್ಳರು ಹಲ್ಲೆ ಮಾಡಿ, ರಾಜಾರೋಷವಾಗಿ ತಪ್ಪಿಸಿಕೊಂಡು ಹೋಗಿರುವ ಘಟನೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.
ಇದು ಪೊಲೀಸರು ಮತ್ತು ಕಳ್ಳರ ಮಧ್ಯೆ ನಡೆದ ಫೈಟಿಂಗ್ ಅಂದರೆ ನೀವು ನಂಬಲೇಬೇಕು. ಬೆಂಗಳೂರಿನ ಪೊಲೀಸರಿಗೆ ಸಂಗಮ್ ವೃತ್ತದಲ್ಲಿ ನಡುಬೀದಿಯಲ್ಲಿ ಹೊಡೆದು ಧಾರವಾಡದ ಇರಾನಿ ಗ್ಯಾಂಗ್‌ನ ನಟೋರಿಯಸ್ ಕಳ್ಳರು ಪರಾರಿಯಾಗಿದ್ದಾರೆ.
ಏನಿದು ಘಟನೆ?
ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಗಮನ ಬೇರೆಡೆ ಸೆಳೆದು ಕಳ್ಳತನ ಹಾಗೂ ಸರಗಳ್ಳತನ ಮಾಡುತ್ತಿದ್ದ ಕಳ್ಳರ ಹಾವಳಿ ಹೆಚ್ಚಾಗಿತ್ತು. ಇದರ ಹಿಂದೆ ಧಾರವಾಡದ ಇರಾನಿ ಗ್ಯಾಂಗ್‌ನ ಕೈವಾಡ ಇದೆ ಎಂಬ ಮಾಹಿತಿ ಬೆಂಗಳೂರು ಪೊಲೀಸರಿಗೆ ಸಿಕ್ಕಿತ್ತು.
ಈ ಮಾಹಿತಿ ಆಧರಿಸಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಎಸ್‌ಐ ಸಂತೋಷ್ ಹಾಗೂ ಮಾಗಡಿ ರೋಡ್ ಠಾಣೆ ಎಸ್.ಐ ರವಿಕುಮಾರ್ ನೇತೃತ್ವದ ತಂಡ ಧಾರವಾಡಕ್ಕೆ ಬಂದಿತ್ತು. ಇಂದು ಪೊಲೀಸರು ಇರಾನಿ ಗ್ಯಾಂಗ್‌ನ ಸದಸ್ಯರನ್ನು ಫಾಲೋ ಮಾಡುತ್ತಿದ್ದಾಗ ತಮಗೆ ಬೇಕಿದ್ದ ಮೂವರು ಇರಾನಿ ಕಳ್ಳರು ಸಂಗಮ್ ವೃತ್ತದ ಬಳಿ ಇರುವ ಖಚಿತ ಮಾಹಿತಿ ಸಿಕ್ಕಿದೆ. ಇನ್ನೋವಾದಲ್ಲಿ ಬಂದಿಳಿದ ಪೊಲೀಸರು ಮೂವರ ಮೇಲೆ ದಾಳಿ ಮಾಡಿ ಕೈಗೆ ಬೇಡಿ ತೋಡಿಸಲು ಮುಂದಾದಾಗ ಮಾರಾಮಾರಿ ನಡೆದಿದೆ.
ಗಲಾಟೆಯ ವೇಳೆ ಪಿಎಸ್‌ಐ ಸಂತೋಷ್ ಅವರಿಗೆ ಗಾಯವಾಗಿದೆ. ಸದ್ಯ ಇರಾನಿ ಗ್ಯಾಂಗ್‌ನ ಮೂವರು ಬೈಕ್ ಏರಿ ಪಾರಾಗಿದ್ದು, ಓರ್ವ ಸ್ಥಳೀಯ ಇರಾನಿ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.