ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತ ಮಾಡಲಿ ಎಂದು ರಾಜ್ಯದ ಜನರು ಹೆಚ್ಚು ಸ್ಥಾನಗಳನ್ನು ನಮಗೆ ನೀಡಿದ್ದರು. ಆದರೆ ಪೂರ್ಣ ಬಹುಮತ ಕೊಡಲಿಲ್ಲ. ಇದು ರಾಜ್ಯದಲ್ಲಾದ ಒಂದು ದುರಂತ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಮರ್ಯಾದೆ ಇಲ್ಲದೇ ಜೆಡಿಎಸ್ ಜೊತೆಗೆ ಹೋಗಿ ಸೇರಿಕೊಂಡಿತು. ಅಧಿಕಾರದ ವ್ಯಾಮೋಹದಿಂದ ಕಾಂಗ್ರೆಸ್ ಜೆಡಿಎಸ್ ಜೊತೆಗೆ ಹೋಯಿತು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನ ಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಕೆಲ ಶಾಸಕರು ಬಿಜೆಪಿ ಸೇರ್ಪಡೆಯಾದರು. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಂದವರಿಗೆ ಸ್ಥಾನಗಳನ್ನು ಕೊಡಬೇಕು ಎಂದರು.
Advertisement
Advertisement
ಪೂರ್ಣ ಬಹುಮತ ಬಾರದ ಕಾರಣಕ್ಕೆ ಸ್ವಲ್ಪ ಗೊಂದಲವಿದೆ. ಗೊಂದಲ ಇಲ್ಲ ಎಂದು ಹೇಳಲ್ಲ. ಇದನ್ನು ಕೇಂದ್ರದ ನಾಯಕರು, ಸಿಎಂ ಸರಿ ಮಾಡುತ್ತಾರೆ. ದಾರಿಯಲ್ಲಿ ನಿಂತುಕೊಂಡು ವೈಯಕ್ತಿಕ ಹೇಳಿಕೆ ನೀಡಿದರೆ ಮಂತ್ರಿ ಆಗುತ್ತೇವೆ ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ. ಪಕ್ಷದ ವಿಚಾರವನ್ನು ದಯವಿಟ್ಟು ರಸ್ತೆಗೆ ತರಬೇಡಿ, ಮಾತನಾಡಲು ಸ್ವತಂತ್ರ ಇದೆ ಎಂದು ಏನು ಬೇಕಾದರೂ ಹೇಳಲು ಬಿಜೆಪಿಯಲ್ಲಿ ಅವಕಾಶ ಇಲ್ಲ. ಕಾರ್ಯಕರ್ತರು ನಿಮ್ಮನ್ನು ಶಾಸಕ, ಪರಿಷತ್ ಸದಸ್ಯರನ್ನಾಗಿಸಿದ್ದಾರೆ. ಕಾರ್ಯಕರ್ತರಿಗೆ ಏನೂ ಇಲ್ಲ. ಕಾಂಗ್ರೇಸ್, ಜೆಡಿಎಸ್ ನಿಂದ ಬಂದಿದ್ದೀರಾ, ಬಿಜೆಪಿಯಿಂದ ಗೆದ್ದಿದ್ದೀರಾ ಎಂಬ ಪ್ರಶ್ನೆ ಅಲ್ಲ. ನಿಮ್ಮನ್ನು ಗೆಲ್ಲಿಸಿದ್ದು ಸಾಮಾನ್ಯ ಕಾರ್ಯಕರ್ತರು ನೀವು ಮಂತ್ರಿ ಆದರೆ ಖುಷಿ ಪಡೋದೂ ಕಾರ್ಯಕರ್ತರೇ ಎಂದರು.
Advertisement
Advertisement
ಮಂತ್ರಿ ಆಗಲಿಲ್ಲ ಎಂಬ ಕಾರಣಕ್ಕೆ ನಿಮ್ಮ ಹೇಳಿಕೆಗಳು ಕಾರ್ಯಕರ್ತರ ಮನಸ್ಸಿಗೆ ನೋವು ಮಾಡಬಾರದು. ಯಾರನ್ನು ಮಂತ್ರಿ ಮಾಡಬೇಕು, ಯಾರನ್ನು ಮಾಡಬಾರದು ಎಂಬುದನ್ನು ಪಕ್ಷ ನಿರ್ಧರಿಸುತ್ತೆ. ಯಾರೋ ಮೂರ್ನಾಲ್ಕು ಜನ ಹೇಳಿಕೆ ಕೊಡುತ್ತಾರೆ ಎಂದರೆ ಅವರೇ ಬಿಜೆಪಿ ಅಲ್ಲ. ಬಿಜೆಪಿಗೆ ಅನ್ಯಾಯ ಮಾಡುತ್ತಿದ್ದಾರೆ, ಬೀದಿಗೆ ತರುತ್ತಿದ್ದಾರೆ ಎಂಬ ನೋವು ಕಾರ್ಯಕರ್ತರಿಗೆ ಇದೆ. ಯಾವ ಸಮಯದಲ್ಲಿ ಅಂತಹವರಿಗೆ ಬುದ್ಧಿ ಕಳಿಸಬೇಕೋ, ಆ ಸಮಯದಲ್ಲಿ ಕಾರ್ಯಕರ್ತರು ಬುದ್ಧಿ ಕಲಿಸುತ್ತಾರೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಮತ್ತು ಬಿಜೆಪಿ ಜೊತೆ ಇದ್ದೇವೆ ಎಂಬುದನ್ನು ರಾಜ್ಯದ ಜನರು ತೋರಿಸುತ್ತಿದ್ದಾರೆ. ಬಿಜೆಪಿ ಪಕ್ಷವನ್ನು ಬಹಳಷ್ಟು ಜನ ಪ್ರಾಣ ಬಿಟ್ಟು ಕಟ್ಟಿದ್ದಾರೆ, ಅವರೆಲ್ಲರ ಆತ್ಮಕ್ಕೆ ಶಾಂತಿ ಬರುವಂತೆ ನಡೆದುಕೊಳ್ಳಬೇಕು. ಪಕ್ಷ ಹಾಗೂ ಸಂಘಟನೆ ಬಗ್ಗೆ ಒರಟಾಗಿ ಮಾತನಾಡುವ ಶಾಸಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.